ಚೆನ್ನೈ: ಎರಡು ರಾಟ್ ವೀಲರ್ ನಾಯಿಗಳು ಐದು ವರ್ಷದ ಬಾಲಕಿ ಮೇಲೆ ದಾಳಿ ಮಾಡಿದ ಪರಿಣಾಮ ಬಾಲಕಿ ಗಂಭೀರ ಗಾಯಗೊಂಡ ಘಟನೆ ಚೆನ್ನೈನ ಉದ್ಯಾನವನವೊಂದರಲ್ಲಿ ನಡೆದಿದೆ. ಚೆನ್ನೈನ ಥೌಸಂಡ್ ಲೈಟ್ಸ್ ಪ್ರದೇಶದ ಸಾರ್ವಜನಿಕ ಉದ್ಯಾನವನದಲ್ಲಿ ಈ ಘಟನೆ ನಡೆದಿದೆ. ನಾಯಿಗಳ ಮಾಲೀಕ ಅವುಗಳನ್ನು ಲೂಸ್ ಬಿಟ್ಟ ಪರಿಣಾಮ ನಾಯಿಗಳು ಬಾಲಕಿಯ ಮೇಲೆರಗಿದೆ.
ದಾಳಿ ನಡೆದ ತಕ್ಷಣ ಬಾಲಕಿಯ ತಾಯಿ ಆಕೆಯನ್ನು ರಕ್ಷಿಸಲು ಧಾವಿಸಿದ್ದಾರೆ. ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಯಿಗಳ ಮಾಲೀಕರನ್ನು ಬಂಧಿಸಿದ್ದಾರೆ.
ನಾವು ಮಾಲೀಕರನ್ನು ಬಂಧಿಸಿದ್ದೇವೆ ಮತ್ತು ನಾಯಿಗಳನ್ನು ನೋಡಿಕೊಳ್ಳುವ ಇತರ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಶೇಖರ್ ದೇಶಮುಖ್ ತಿಳಿಸಿದ್ದಾರೆ. ಪಾರ್ಕ್ನಲ್ಲಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ ಎರಡು ನಾಯಿಗಳು ಬಾಲಕಿಯ ಮೇಲೆ ದಾಳಿ ಮಾಡುವ ದೃಶ್ಯ ಸೆರೆಯಾಗಿದೆ. ರಾಟ್ವೀಲರ್ ದಾಳಿಗೊಳಗಾದ ಸುದಕ್ಷ ಎಂಬ ಐದು ವರ್ಷದ ಬಾಲಕಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಮಾರ್ಚ್ನಲ್ಲಿ ಪಿಟ್ಬುಲ್ ಟೆರಿಯರ್, ಅಮೆರಿಕನ್ ಬುಲ್ಡಾಗ್, ರಾಟ್ವೀಲರ್ ಮತ್ತು ಮ್ಯಾಸ್ಟಿಫ್ಸ್ ಸೇರಿದಂತೆ 23 ತಳಿಗಳ ನಾಯಿಗಳ ಮಾರಾಟ ಮತ್ತು ಸಂತಾನೋತ್ಪತ್ತಿಯನ್ನು ನಿಷೇಧಿಸುವಂತೆ ಕೇಂದ್ರವು ರಾಜ್ಯಗಳನ್ನು ಕೇಳಿದೆ. ಈಗಾಗಲೇ ಈ ತಳಿಗಳನ್ನು ಸಾಕುಪ್ರಾಣಿಗಳಾಗಿ ಹೊಂದಿರುವವರು ತಕ್ಷಣವೇ ಅವುಗಳ ಸಂತಾನೋತ್ಪತ್ತಿಯನ್ನು ನಿಷೇಧಿಸುವಂತೆ ನಿರ್ದೇಶನ ನೀಡಿದೆ.