ಲೂಧಿಯಾನ (ಪಂಜಾಬ್): ಲೂಧಿಯಾನ ಜಿಲ್ಲೆಯ ಗಿಯಾಸ್ಪುರ ಪ್ರದೇಶದ ವೆರ್ಕಾ ಬೂತ್ ಬಳಿ ಅನಿಲ ಸೋರಿಕೆಯಾಗಿ 9 ಮಂದಿ ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಿಯಾಸ್ಪುರದ ಸುವಾ ರಸ್ತೆಯಲ್ಲಿರುವ ಕಾರ್ಖಾನೆಯಲ್ಲಿ ಈ ಅವಘಡ ಸಂಭವಿಸಿದ್ದು, ಸದ್ಯ ವೈದ್ಯರ ತಂಡ ಸ್ಥಳಕ್ಕೆ ದೌಡಾಯಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಕಾರ್ಖಾನೆಯ ಸಮೀಪದಲ್ಲಿರುವ ಅಕ್ಕಪಕ್ಕದ ಮನೆಯಲ್ಲಿದ್ದ ಜನರು, ಅನಿಲದ ಪ್ರಭಾವಕ್ಕೆ ಉಸಿರಾಡಲು ಸಾಧ್ಯವಾಗದೇ ಮೂರ್ಛೆ ಹೋಗಿದ್ದು ಅವರುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆಲ.
ಮೂಲಗಳ ಪ್ರಕಾರ, ಗ್ಯಾಸ್ ಸೋರಿಕೆಯಿಂದಾಗಿ 300 ಮೀಟರ್ ವ್ಯಾಪ್ತಿಯ ಜನರು ಉಸಿರಾಡಲು ತೊಂದರೆ ಅನುಭವಿಸಿದ್ದಾರೆ. ಆದರೆ ಅನಿಲ ಸೋರಿಕೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಮೂರ್ಛೆ ತಪ್ಪಿದ ಜನರನ್ನು ಆಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲಾಗುತ್ತಿದೆ. ಮಾಹಿತಿ ತಿಳಿದ ತಕ್ಷಣವೇ ಎನ್ಡಿಆರ್ಎಫ್ ತಂಡಗಳು ರಕ್ಷಣಾ ಕಾರ್ಯಕ್ಕಾಗಿ ಸ್ಥಳಕ್ಕೆ ಆಗಮಿಸಿದ್ದಾರೆ. ಆ ಪ್ರದೇಶದಲ್ಲಿರುವ ಇತರೆ ಜನರು ಗ್ಯಾಸ್ ಪ್ರಭಾವಕ್ಕೆ ಒಳಪಡದಂತೆ ಅವರನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ.
ಘಟನೆಯಿಂದ ಒಂಬತ್ತು ಮಂದಿ ಸಾವನ್ನಪ್ಪಿದ್ದು, ಅನೇಕರು ಪ್ರಜ್ಞಾಹೀನರಾಗಿದ್ದಾರೆ. ಅವರೆಲ್ಲರನ್ನೂ ಆಸ್ಪತ್ರೆಗೆ ರವಾನಿಸಲಾಗಿದೆ. ಜನರ ಜೀವ ಉಳಿಸುವುದು ನಮ್ಮ ಕರ್ತವ್ಯವಾಗಿದ್ದು, ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ ಎಂದು ಲೂಧಿಯಾನದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.