ವಿಶ್ವಕಪ್ಗೂ ಮುನ್ನ ಭಾರತ ಆಡಲಿರುವ ಕೊನೆಯ ದ್ವಿಪಕ್ಷೀಯ ಸರಣಿಗೆ ತಂಡ ಪ್ರಕಟಗೊಂಡಿದ್ದು, ಹಿರಿಯ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಆರ್.ಅಶ್ವಿನ್ಗೆ ಅಚ್ಚರಿಯ ರೀತಿಯಲ್ಲಿ ಸ್ಥಾನ ದೊರೆತಿದೆ.
ಏಷ್ಯಾಕಪ್ನಲ್ಲಿ ಬಾಂಗ್ಲಾದೇಶ ವಿರುದ್ಧದ ಸೂಪರ್-4 ಹಂತದ ಪಂದ್ಯದಲ್ಲಿ ಅಕ್ಷರ್ ಪಟೇಲ್ ಗಾಯಗೊಂಡಿದ್ದು, ಅಶ್ವಿನ್ಗೆ ವರದಾನವಾಗಿ ಪರಿಣಮಿಸಿದೆ. ಸೆ.28ರ ವೇಳೆಗೆ ಅಕ್ಷರ್ ಸಂಪೂರ್ಣ ಫಿಟ್ ಆಗದಿದ್ದರೆ, ಅಶ್ವಿನ್ರನ್ನು ವಿಶ್ವಕಪ್ ತಂಡಕ್ಕೆ ಸೇರ್ಪಡೆಗೊಳಿಸುವುದು ಬಹುತೇಕ ಖಚಿತ ಎಂದೇ ಹೇಳಲಾಗುತ್ತಿದೆ. ಕೆಲ ವರ್ಷಗಳಿಂದ ಟೆಸ್ಟ್ ಕ್ರಿಕೆಟ್ಗಷ್ಟೇ ಸೀಮಿತಗೊಂಡಿರುವ ಅಶ್ವಿನ್, ಕೊನೆಯ ಬಾರಿಗೆ ಭಾರತ ಪರ ಏಕದಿನ ಪಂದ್ಯವನ್ನಾಡಿದ್ದು 2022ರ ಜನವರಿಯಲ್ಲಿ. ಆದರೂ ಅವರು ಅನುಭವವನ್ನು ಪರಿಗಣಿಸಿ ಆಯ್ಕೆಗೆ ಪರಿಗಣಿಸುವ ಸುಳಿವನ್ನು ಬಿಸಿಸಿಐ ಆಯ್ಕೆಗಾರರು ನೀಡಿರುವುದಾಗಿ ಕಂಡು ಬರುತ್ತಿದೆ.
ವಿಶ್ವಕಪ್ ತಂಡಕ್ಕೆ ಸೇರಿಕೊಳ್ಳುವಂತೆ ಕರೆ ಬರಬಹುದು ಎನ್ನುವ ನಿರೀಕ್ಷೆ ಅಶ್ವಿನ್ಗೆ ಇತ್ತು ಎಂದು ಕಾಣುತ್ತದೆ. ಇದೇ ಕಾರಣದಿಂದಾಗಿ 10 ದಿನಗಳ ಹಿಂದೆ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್ಸಿಎ)ಗೆ ಆಗಮಿಸಿ ಅಭ್ಯಾಸ ಆರಂಭಿಸಿದ್ದರು. ಸದ್ಯ ತಮಿಳುನಾಡು ಕ್ರಿಕೆಟ್ ಸಂಸ್ಥೆ ಅಯೋಜಿಸಿರುವ ಟೂರ್ನಿಯಲ್ಲಿ ಆಡುತ್ತಿರುವ ಅಶ್ವಿನ್, ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ತಾವಿನ್ನೂ ಏಕದಿನ ತಂಡಕ್ಕೆ ಅವಶ್ಯಕ ಎನ್ನುವುದನ್ನು ಸಾಬೀತುಪಡಿಸಲು ಎದುರು ನೋಡುತ್ತಿದ್ದಾರೆ.