ಬೆಂಗಳೂರು: ಈ ಬಾರಿಯ ಚುನಾವಣೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಕಟ್ಟಿಹಾಕಲು ಬಿಜೆಪಿ ಭರ್ಜರಿ ಪ್ಲ್ಯಾನ್ ಮಾಡಿದ್ದು, ಅದರಂತೆ ಬಿಜೆಪಿಯ ಇಬ್ಬರು ಪ್ರಭಾವಿ ನಾಯಕರಾದ ವಿ. ಸೋಮಣ್ಣ ಹಾಗೂ ಆರ್ ಅಶೋಕ್ ಅವರನ್ನು ಎರಡು ಕ್ಷೇತ್ರಗಳಲ್ಲಿ ಕಣಕ್ಕಿಳಿಸಿದೆ. ಡಿಕೆಶಿ ವಿರುದ್ಧ ಕನಕಪುರದಲ್ಲಿ ಅಶೋಕ್ ಸ್ಪರ್ಧೆ ಮಾಡಿದರೆ, ಸಿದ್ದರಾಮಯ್ಯ ವಿರುದ್ಧ ವರುಣಾದಲ್ಲಿ ಸೋಮಣ್ಣ ಅಖಾಡಕ್ಕಿಳಿದಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಬಿಜೆಪಿಗೆ ತಿರುಗೇಟು ನೀಡಲು ಕಾಂಗ್ರೆಸ್ ಕೂಡಾ ಚಿಂತನೆ ನಡೆಸುತ್ತಿದೆ.
ಸದ್ಯ ಪದ್ಮನಾಭನಗರದಲ್ಲಿ ಆರ್. ಅಶೋಕ್ ವಿರುದ್ಧ ರಘುನಾಥ ನಾಯ್ಡು ಅವರು ಕಾಂಗ್ರೆಸ್ ಅಭ್ಯರ್ಥಿ ಆಗಿದ್ದಾರೆ. ಅವರಿಗೆ ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಬಿಫಾರಂ ಕೂಡಾ ನೀಡಲಾಗಿದೆ. ಆದ್ರೆ ಕೊನೆಯ ಗಳಿಗೆಯಲ್ಲಿ ಅಭ್ಯರ್ಥಿ ಬದಲಾವಣೆಯ ಸಾಧ್ಯತೆಗಳು ಕೂಡಾ ಅಲ್ಲಗಳೆಯುವ ಹಾಗಿಲ್ಲ. ಕನಕಪುರದಲ್ಲಿ ಡಿಕೆಶಿಗೆ ಟಕ್ಕರ್ ಕೊಡಲು ಸಜ್ಜಾಗಿರುವ ಆರ್. ಅಶೋಕ್ ಅವರನ್ನು ಪದ್ಮನಾಭನಗರದಲ್ಲಿ ಕಟ್ಟಿಹಾಕಲು ಡಿಕೆಶಿ ಸಹೋಹರರು ಚಿಂತನೆ ನಡೆಸುತ್ತಿದ್ದಾರೆ.
ಈ ನಿಟ್ಟಿನಲ್ಲಿ ಸಂಸದ ಡಿಕೆ ಸುರೇಶ್ ಅವರನ್ನು ಅಖಾಡಕ್ಕೆ ಇಳಿಸುವ ಬಗ್ಗೆ ಚರ್ಚೆಗಳು ಕೂಡಾ ನಡೆಯುತ್ತಿದ್ದು, ಒಂದು ವೇಳೆ ಹೈಕಮಾಂಡ್ ಅಸ್ತು ಎಂದರೆ ಕೊನೆಯ ಕ್ಷಣದಲ್ಲಿ ಪದ್ಮನಾಭನಗರದಲ್ಲಿ ಅಭ್ಯರ್ಥಿ ಬದಲಾವಣೆಯ ನಿಟ್ಟಿನಲ್ಲಿ ಕಾಂಗ್ರೆಸ್ ಹೆಜ್ಜೆ ಇಡುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರವನ್ನು ಮುಖಂಡರು ಕೈಗೊಂಡಿಲ್ಲ.
ಕನಕಪುರದಲ್ಲಿ ಡಿಕೆಶಿ ಸ್ಪರ್ಧೆ ಮಾಡಿದರೂ ಎಲ್ಲಾ ಜವಾಬ್ದಾರಿಯನ್ನು ಡಿಕೆ ಸುರೇಶ್ ನಿರ್ವಹಣೆ ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ಡಿಕೆಶಿ ಹೆಚ್ಚಾಗಿ ಹೋಗುತ್ತಿರಲಿಲ್ಲ. ಆದ್ರೆ ಈ ಬಾರಿ ಆರ್. ಅಶೋಕ್ ಅವರನ್ನು ಪಕ್ಷ ಕನಕಪುರದಲ್ಲಿ ಸ್ಪರ್ಧೆ ನಡೆಸಲಿದ್ದಾರೆ. ಈ ಮೂಲಕ ಡಿಕೆಶಿ ಗೆಲುವಿನ ಹಾದಿಗೆ ತೊಡಕಾಗಿ ಪರಿಣಮಿಸುವ ಸಾಧ್ಯತೆ ಇದೆ. ಇದಕ್ಕೆ ತಿರುಗೇಟು ನೀಡಲು ಇದೀಗ ಡಿಕೆ ಸಹೋದರರು ಪ್ರತಿತಂತ್ರ ಹೂಡುತ್ತಿದ್ದಾರೆ.
ಕ್ಷೇತ್ರ ತ್ಯಾಗಕ್ಕೆ ಸಿದ್ಧ ಎಂಬ ಅಭ್ಯರ್ಥಿ
ಒಂದು ವೇಳೆ ಪದ್ಮನಾಭನಗರದಲ್ಲಿ ಡಿಕೆ ಸುರೇಶ್ ನಿಂತರೆ ನಾನು ಕ್ಷೇತ್ರ ತ್ಯಾಗಕ್ಕೆ ಸಿದ್ಧನಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ರಘುನಾಥ ನಾಯ್ಡು ಹೇಳಿದ್ದಾರೆ. ಡಿಕೆ ಸುರೇಶ್ ಬಂದ್ರೆ 20 ಸಾವಿರ ಲೀಡ್ ನಲ್ಲಿ ಗೆಲ್ಲಿಸ್ತೇವೆ, ಇದನ್ನು ನಾನೇ ಡಿಕೆಶಿವಕುಮಾರ್ ಮುಂದೆ ಹೇಳಿದ್ದೇನೆ. ಹೇಗೆ ಗೆಲ್ಲಬಹುದು ಅಂತ ಡಿಕೆ ಶಿವಕುಮಾರ್ ಗೆ ವಿವರ ಕೊಟ್ಟಿದ್ದೇನೆ. ಡಿಕೆಶಿವಕುಮಾರ್ ಡಿಕೆ ಸುರೇಶ್ ಇಬ್ಬರೂ ಪಕ್ಷದ ಆಸ್ತಿ. ಹೀಗಾಗಿ ನಾನು ಡಿಕೆ ಸುರೇಶ್ ಬಂದ್ರೆ ಕ್ಷೇತ್ರ ಬಿಟ್ಟುಕೊಡ್ತೇನೆ ಎಂದಿದ್ದಾರೆ. ಒಟ್ಟಿನಲ್ಲಿ ಈ ಬಾರಿ ಚುನಾವಣಾ ಕಣ ಕುತೂಹಲ ಕೆರಳಿಸಿದೆ.