ಇಂಗ್ಲೆಂಡ್ ವಿರುದ್ಧ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಯುವ ಬ್ಯಾಟ್ಸ್ಮನ್ ರಚಿನ್ ರವಿಂದ್ರ ಅವರು ಚೊಚ್ಚಲ ಶತಕ ಸಿಡಿಸಿದ್ದಾರೆ. ಆ ಮೂಲಕ ನ್ಯೂಜಿಲೆಂಡ್ ತಂಡದ 9 ವಿಕೆಟ್ಗಳ ಗೆಲುವಿಗೆ ನೆರವಾದರು.
ಇದಕ್ಕೂ ಮುನ್ನ ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ದ ಇನಿಂಗ್ಸ್ ಆರಂಭಿಸಿದ್ದ ರಚಿನ್ ರವೀಂದ್ರ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಆ ಮೂಲಕ ಟೂರ್ನಿಗೂ ಮುನ್ನ ವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದರು. ಅಂದ ಹಾಗೆ ನಾಯಕ ಕೇನ್ ವಿಲಿಯಮ್ಸನ್ ಅವರ ಅನುಪಸ್ಥಿತಿಯಲ್ಲಿ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ಪಡೆದುಕೊಂಡು ರಚಿನ್ ರವೀಂದ್ರ ತಮ್ಮ ಬ್ಯಾಟಿಂಗ್ ಸಾಮರ್ಥ್ಯ ಏನೆಂಬುದನ್ನು ಸಾಬೀತುಪಡಿಸಿದ್ದಾರೆ.
2021ರಲ್ಲಿ ಭಾರತದ ವಿರುದ್ದ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ರಚಿನ್ ರವೀಂದ್ರ ಎಲ್ಲರ ಗಮನ ಸೆಳೆದಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧ ಏಕದಿನ ವಿಶ್ವಕಪ್ ಪದಾರ್ಪಣೆ ಪಂದ್ಯದಲ್ಲಿಯೇ ರಚಿನ್ ರವಿಂದ್ರ ಚೊಚ್ಚಲ ಶತಕ ಬಾರಿಸಿದ್ದಾರೆ. ವಿಲ್ ಯಂಗ್ ವಿಕೆಟ್ ಒಪ್ಪಿಸಿದ ಬಳಿಕ ಕ್ರೀಸ್ಗೆ ಬಂದ ರಚಿನ್ ರವೀಂದ್ರ, ಎದುರಿಸಿದ ಮೊದಲನೇ ಎಸೆತದಿಂದಲೇ ಸ್ಪೋಟಕ ಬ್ಯಾಟಿಂಗ್ಗೆ ಕೈ ಹಾಕಿದರು.
82 ಎಸೆತಗಳಲ್ಲಿಯೇ ಶತಕ ಪೂರ್ಣಗೊಳಿಸಿದ ರಚಿನ್, ಒಟ್ಟರೆ 96 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್ ಹಾಗೂ 11 ಬೌಂಡರಿಗಳೊಂದಿಗೆ ಅಜೇಯ 123 ರನ್ಗಳನ್ನು ಸಿಡಿಸಿದ್ದಾರೆ. ಇಂಗ್ಲೆಂಡ್ ಬೌಲರ್ಗಳಾದ ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಮೊಯೀನ್ ಅಲಿ, ಸ್ಯಾಮ್ ಕರನ್, ಆದಿಲ್ ರಶೀದ್ ಅವರಿಂದ ಡೆವೋನ್ ಕಾನ್ವೇ ಹಾಗೂ ರಚಿನ್ ರವೀಂದ್ರ ಜೋಡಿಯನ್ನು ಬೇರ್ಪಡಿಸಲು ಸಾಧ್ಯವಾಗಲಿಲ್ಲ. ಈ ಜೋಡಿ ಮುರಿಯದ ಎರಡನೇ ವಿಎಟ್ಗೆ 273 ರನ್ಗಳ ಜೊತೆಯಾಟವನ್ನು ಈ ಜೋಡಿ ಆಡಿತು.
ರಚಿನ್ ರವೀಂದ್ರ ಅವರು ನ್ಯೂಜಿಲೆಂಡ್ನ ವೆಲ್ಲಿಂಗ್ಟನ್ನಲ್ಲಿ ಜನಿಸಿದ್ದರೂ ಇವರ ಅಪ್ಪ-ಅಮ್ಮ ಬೆಂಗಳೂರು ಮೂಲದವರು. ತಂದೆ ರವಿ ಕೃಷ್ಣಮೂರ್ತಿ ಹಾಗೂ ತಾಯಿ ದೀಪಾ ಕೃಷ್ಣಮೂರ್ತಿ ಅವರು ಸಾಫ್ಟ್ವೇರ್ ಎಂಜಿನೀಯರ್ಗಳಾಗಿದ್ದು, ಉದ್ಯೋಗ ಹರಿಸಿ 1990ರ ದಶಕದಲ್ಲಿ ಬೆಂಗಳೂರಿನಿಂದ ನ್ಯೂಜಿಲೆಂಡ್ಗೆ ತೆರಳಿದ್ದರು. ರಚಿನ್ ರವೀಂದ್ರ ಅವರ ತಂದೆ, ಸಾಫ್ಟ್ವೇರ್ ಎಂಜಿನೀಯರ್ ಆಗಿದ್ದರೂ ಅವರು ಕ್ರಿಕೆಟ್ ಅಪ್ಪಟ ಅಭಿಮಾನಿ.
ತಂದೆ ರವಿ ಕೃಷ್ಣಮೂರ್ತಿ ಅವರು ಭಾರತೀಯ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ಅವರ ದೊಡ್ಡ ಅಭಿಮಾನಿಯಾಗಿದ್ದರು. ಈ ಕಾರಣದಿಂದಾಗಿ ರಾಹುಲ್ ದ್ರಾವಿಡ್ ಹೆಸರಿನಿಂದ ‘ರ’ ಮತ್ತು ಸಚಿನ್ ತೆಂಡೂಲ್ಕರ್ ಹೆಸರಿನಿಂದ ‘ಚಿನ್’ ಅಕ್ಷರಗಳನ್ನು ತೆಗೆದುಕೊಂಡು ತಮ್ಮ ಪುತ್ರನಿಗೆ ರಚಿನ್ ಎಂದು ಹೆಸರಿಟ್ಟಿದ್ದರು.