ಹೊಸದಿಲ್ಲಿ: ಹಿಂಸಾಚಾರ ಪೀಡಿತ ಮಣಿಪುರಕ್ಕೆ ಮಂಗಳವಾರ ಭೇಟಿ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪರಿಸ್ಥಿತಿಯನ್ನು ಅವಲೋಕಿಸಿದ್ದು, ಜನಾಂಗೀಯ ಘರ್ಷಣೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ರೂ ಪರಿಹಾರ ಘೋಷಣೆ ಮಾಡಿದರು.
ಮೂರು ದಿನಗಳ ಮಣಿಪುರ ಪ್ರವಾಸ ಕೈಗೊಂಡಿರುವ ಕೇಂದ್ರ ಸಚಿವ ಶಾ ಅವರು ಮಂಗಳವಾರ ಬೆಳಗ್ಗೆ ಸಿಎಂ ಬಿರೇನ್ ಸಿಂಗ್, ರಾಜ್ಯ ಸಚಿವರು, ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್, ಸರಕಾರದ ಮುಖ್ಯ ಕಾರ್ಯದರ್ಶಿ, ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಹಾಗೂ ರಾಜ್ಯದ ಹಿರಿಯ ಅಧಿಕಾರಿಗಳು ಜತೆ ಮಹತ್ವದ ಸಭೆ ನಡೆಸಿದರು. ಕಳೆದ 27 ದಿನಗಳಿಂದ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ, ಅದಕ್ಕೆ ಕಾರಣವಾದ ಅಂಶಗಳು, ಕ್ಷಿಪ್ರವಾಗಿ ಶಾಂತಿ ಸ್ಥಾಪನೆಯ ಸೂತ್ರಗಳ ಬಗ್ಗೆ ಅವಲೋಕಿಸಿದರು. ಈ ವೇಳೆ ರಾಜ್ಯದಲ್ಲಿ ಶಾಂತಿ ಮರುಸ್ಥಾಪನೆಗೆ ನಾಲ್ಕು ನಿರ್ಣಯ ಕೈಗೊಳ್ಳಲಾಯಿತು.
ನಾಲ್ಕು ನಿರ್ಣಯಗಳು
1. ಶಾಂತಿ ಕದಡುವ ದಂಗೆಕೋರರು ಅಥವ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಪೊಲೀಸ್ ಹಾಗೂ ಸೇನಾಧಿಕಾರಿಗಳಿಗೆ ಸೂಚಿಸಲಾಗಿದೆ.
2. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ತಹಬದಿಗೆ ತರಲು ಅಹಿತಕರ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸುವುದು. ಪರಿಸ್ಥಿತಿ ಸುಧಾರಣೆ ಆಗುವವರೆಗೂ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಭದ್ರೆತೆ ಮುಂದುವರಿಸಲು ನಿರ್ದೇಶನ ನೀಡಲಾಗಿದೆ.
3. ಪೆಟ್ರೊಲ್, ಡೀಸೆಲ್, ಆಹಾರ ಪದಾರ್ಥಗಳ ಬೆಲೆ ಏರಿಕೆ ನಿಯಂತ್ರಣ ಮಾಡುವ ಜತೆಗೆ ಕೃತಕ ಅಭಾವ ಸೃಷ್ಟಿಸುವ ಕಾಳಸಂತೆಕೋರರ ಮೇಲೆ ಕ್ರಮ ಕೈಗೊಳ್ಳುವುದು. ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಆದೇಶ ನೀಡಿದ್ದಾರೆ.
4. ಕಳೆದೊಂದು ತಿಂಗಳಿಂದ ರಾಜ್ಯದಲ್ಲಿನಡೆದ ಜನಾಂಗೀಯ ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 10 ಲಕ್ಷ ರೂ ಪರಿಹಾರ ನೀಡಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಮಣಿಪುರದಲ್ಲಿ ಕುರ್ಕಿಯ ಸಂರಕ್ಷಿತ ಅರಣ್ಯ ಪ್ರದೇಶ ವಿಚಾರವಾಗಿ ಆರಂಭವಾದ ಸಂಘರ್ಷ ಹಲವು ತಿರುವು ಪಡೆದುಕೊಂಡು ಜನಾಂಗೀಯ ಕಲಹವಾಗಿ ಬದಲಾಗಿದೆ. ಮೈತೇಯಿ ಸಮುದಾಯಕ್ಕೆ ಎಸ್ಟಿ ಸ್ಥಾನಮಾನ ನೀಡುವುದನ್ನು ವಿರೋಧಿಸಿ ಬುಡಕಟ್ಟು ಸಮುದಾಯ ಕೈಗೊಂಡ ಹೋರಾಟ ಉಗ್ರ ಸ್ವರೂಪ ಪಡೆದುಕೊಂಡು ಹಿಂಸಾಚಾರಕ್ಕೆ ತಿರುಗಿತ್ತು. ಅಂದಾಜಿನ ಪ್ರಕಾರ 70 ಮಂದಿ ಮೃತಪಟ್ಟಿದ್ದು, 10 ಸಾವಿರ ಮಂದಿ ನಿರಾಶ್ರಿತಾಗಿದ್ದಾರೆ.