ಬೆಂಗಳೂರು:- ರಾಜಧಾನಿ ಬೆಂಗಳೂರಿನ ದೊಡ್ಡ ದೊಡ್ಡ ಸರ್ಕಾರಿ ಆಸ್ಪತ್ರೆಗಳಲ್ಲಿ ರೇಡಿಯಾಲಜಿಸ್ಟ್ ಇಲ್ಲದೇ ಬಡ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಉಚಿತ ಅಥವಾ ಕಡಿಮೆ ದರದಲ್ಲಿ ಮಾಡಿಸಬಹುದಾದ ಸ್ಕ್ಯಾನಿಂಗ್ಗೆ ಖಾಸಗಿ ಲ್ಯಾಬ್ಗಳಲ್ಲಿ ದುಬಾರಿ ಹಣ ತೆತ್ತು ರೋಗಿಗಳು ಸುಸ್ತಾಗಿದ್ದಾರೆ. ಇಂದಿಗೂ ಖಾಸಗಿ ಲ್ಯಾಬ್ಗಳಿಗೆ ರೋಗಿಗಳ ಅಲೆದಾಟ ನಿಂತಿಲ್ಲ. ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ರೇಡಿಯಾಲಜಿಸ್ಟ್ ಇಲ್ಲ. ಹೀಗಾಗಿ ಬಡ ರೋಗಿಗಳು ಪರದಾಡುವಂತಾಗಿದೆ.
ಉಚಿತ ಸೇವೆ ದೊರೆಯಲಿದೆ ಎಂಬ ಕಾರಣಕ್ಕೆ ರೋಗಿಗಳು, ಅದರಲ್ಲೂ ಬಡ ರೋಗಿಗಳು ಸರಕಾರಿ ಆಸ್ಪತ್ರೆಗಳ ಮೊರೆ ಹೋಗುತ್ತಾರೆ. ಆದರೆ ಸದ್ಯ ರಾಜಧಾನಿ ಸೇರಿದಂತೆ ರಾಜ್ಯದ ಬಹುತೇಕ ಸರ್ಕಾರಿ ಆಸ್ಪತ್ರೆಯಲ್ಲಿ ರೆಡಿಯಾಲಜಿಸ್ಟ್ ಇಲ್ಲದೇ ಇರುವುದರಿಂದ ಗರ್ಭಿಣಿಯರಿಗೆ ಆಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೇರಿದಂತೆ ಬೇರೆ ಎಲ್ಲ ರೀತಿಯ ಸ್ಕ್ಯಾನಿಂಗ್ ಮಾಡಿಸಲು ಖಾಸಗಿ ಲ್ಯಾಬ್ ಮೊರೆ ಹೋಗಬೇಕಾಗಿದೆ. ಇದಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡಬೇಕಿದೆ. ಇದು ಬಡ ರೋಗಿಗಳಿಗೆ ದೊಡ್ಡ ಹೊರೆಯಾಗಿದೆ.
ಇನ್ನು ಕೆಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಯಂ ರೆಡಿಯಾಲಜಿಸ್ಟ್ ಇಲ್ಲ. ವಾರದಲ್ಲಿ ಮೂರು ದಿನ ರೆಡಿಯಾಲಜಿಸ್ಟ್ಗೆ ಅವಕಾಶ ನೀಡಿದ್ದಾರೆ. ಅಷ್ಟಕ್ಕೂ ರೆಡಿಯಾಲಜಿಸ್ಟ್, ವೈದ್ಯರಿಗೆ ತುಂಬಾ ಬೇಡಿಕೆಯಿದೆ. ಖಾಸಗಿ ಲ್ಯಾಬ್ ಹಾಗೂ ಆಸ್ಪತ್ರೆಗಳಲ್ಲಿ ಲಕ್ಷ ಲಕ್ಷ ಸಂಬಳ ನೀಡುತ್ತಾರೆ. ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ತುಂಬಾ ಕಡಿಮೆ ವೇತನ ಹಿನ್ನಲೆ ರೆಡಿಯಾಲಜಿಸ್ಟ್ಗಳು ಖಾಸಗಿ ಲ್ಯಾಬ್ ಹಾಗೂ ಆಸ್ಪತ್ರೆಗಳ ಮೊರೆ ಹೋಗ್ತೀರುವುದು ಇಷ್ಟಕೆಲ್ಲ ಕಾರಣವಾಗಿದೆ.