ಬಾಗಲಕೋಟೆ: ಅಥಣಿಯ ಲಕ್ಷ್ಮಣ ಸವದಿ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಗೊಂಡಿರುವ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಗಟ್ಟಿಯಾಗಿರುವ ಲಿಂಗಾಯತ ಮತಗಳು ಹರಿದು ಹಂಚಿಹೋಗುವ ಸಾಧ್ಯತೆಗಳಿವೆ.
ಇದನ್ನು ತಡೆಯಲು ಬಿಜೆಪಿ ನಾನಾ ಸರ್ಕಸ್ ಗಳನ್ನು ಶುರು ಮಾಡಿದೆ. ಇದಕ್ಕೆ ಕೌಂಟರ್ ಕೊಡಲು, ಕಾಂಗ್ರೆಸ್ ಕೂಡ ಸಿದ್ಧತೆಗಳನ್ನು ನಡೆಸಿದ್ದು ಇದೇ 25ರಂದು ಲಿಂಗಾಯತರ ಪರಮಪವಿತ್ರ ಧಾಮವಾದ, ಬಸವಣ್ಣನವರ ಲಿಂಗೈಕ್ಯ ಸ್ಥಳವಾದ ಕೂಡಲ ಸಂಗಮಕ್ಕೆ ರಾಹುಲ್ ಗಾಂಧಿಯವರನ್ನು ಕರೆಯಿಸುವ ಲೆಕ್ಕಾಚಾರ ಹಾಕಿಕೊಂಡಿದೆ.
ಕೂಡಲಸಂಗಮದ ಬಸವ ಸಭಾ ಭವನವನ್ನು ಈಗಾಗಲೇ ಬುಕ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಏ. 25ರಂದು ಜಯಂತಿ ಸಮಾರಂಭದಲ್ಲಿ ರಾಹುಲ್ ಗಾಂಧಿ ಜತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಲಿಂಗಾಯತ ಮುಖಂಡರಾದ ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿ ಪಾಲ್ಗೊಳ್ಳಲಿದ್ದಾರೆ. ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಲಾಗಿದೆ.
ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಶುಕ್ರವಾರ ಕೂಡಲಸಂಗಮಕ್ಕೆ ಭೇಟಿ ನೀಡಿ ಸಭಾ ಭವನ ವೀಕ್ಷಿಸಿದ್ದಾರೆ. ಆದರೆ ಈವರೆಗೂ ಕಾರ್ಯಕ್ರಮದ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೂ, ಇಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ ನಡೆಸುವ ಸಾಧ್ಯತೆಯಿದೆ. ಹಾಗಾಗಿಯೇ, ಈ ಸಭಾಂಗಣವನ್ನು ಬುಕ್ ಮಾಡಲಾಗಿದೆ ಎಂಬ ವದಂತಿಯಂತೂ ಹರಿದಾಡುತ್ತಿದೆ. ಹಾಗೊಮ್ಮೆ ರಾಹುಲ್ ಗಾಂಧಿಯವರು ಕೂಡಲ ಸಂಗಮಕ್ಕೆ ಬರುವುದು ಪಕ್ಕಾ ಆದರೆ, ಅದು ಖಂಡಿತವಾಗಿಯೂ ಬಿಜೆಪಿ ಟಕ್ಕರ್ ಕೊಡುವ ಉದ್ದೇಶವೇ ಆಗಿರುತ್ತದೆಯೇ ಹೊರತು ಮತ್ತೇನೂ ಅಲ್ಲ.
ಕಳಂಕದ ವಿಚಾರಕ್ಕೆ ಬರುವುದಾದರೆ, ಕಾಂಗ್ರೆಸ್ ಪಕ್ಷವು, ಸಿದ್ದರಾಮಯ್ಯನವರ ಸರ್ಕಾರದ ಕಾಲಘಟ್ಟದಲ್ಲಿ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವ ಮೂಲಕ, ವೀರಶೈವರಿಂದ ಲಿಂಗಾಯತರನ್ನು ದೂರ ಮಾಡಲು ಯತ್ನಿಸಿ ಆ ಸಮುದಾಯ ಒಡೆಯುವ ಯತ್ನ ಮಾಡಿತ್ತೆಂಬ ಆರೋಪವಿದೆ. ಇದೇ ಕಾರಣಕ್ಕೆ, ಕಳೆದ ಚುನಾವಣೆಯಲ್ಲಿ ಲಿಂಗಾಯತ ಸಮುದಾಯ ಕಾಂಗ್ರೆಸ್ಸಿಗೆ ತಕ್ಕ ಪಾಠ ಕಲಿಸಿತ್ತು. ಹಾಗಾಗಿ, ಆ ಕಳಂಕವನ್ನು ನಿವಾರಿಸಿಕೊಳ್ಳಲು ಈ ಬಾರಿ, ಸವದಿ, ಶೆಟ್ಟರ್ ಪ್ರಕರಣಗಳನ್ನ ಇಟ್ಟುಕೊಂಡು, ಹೆಚ್ಚಿನ ಲಿಂಗಾಯತರಿಗೆ ಟಿಕೆಟ್ ಕೊಟ್ಟಿರುವುದನ್ನೂ ಜತೆಗಿಟ್ಟುಕೊಂಡು ಲಿಂಗಾಯತ ಸಮುದಾಯವನ್ನು ಮುಟ್ಟಲು ಕಾಂಗ್ರೆಸ್ ನಿರ್ಧರಿಸಿದೆ. ಅದರ ಮುಂದುವರಿದ ಭಾಗವೇ ಕೂಡಲ ಸಂಗಮದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಕರೆಯಿಸುವುದೇ ಆಗಿದೆ.