ನವದೆಹಲಿ: ಉತ್ತರ ಪ್ರದೇಶದ ಎರಡು ಹೈವೊಲ್ಟೇಜ್ ಕ್ಷೇತ್ರಗಳಾದ ಅಮೇಥಿ (Amethi) ಮತ್ತು ರಾಯ್ ಬರೇಲಿಯಿಂದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸ್ಪರ್ಧಿಸುವುದು ಬಹುತೇಕ ಖಚಿತ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ. ಈ ವಾರಂತ್ಯದಲ್ಲಿ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ.
ಸೋನಿಯಾ ಗಾಂಧಿ ರಾಜ್ಯಸಭೆಗೆ ಆಯ್ಕೆಯಾಗಿದ್ದು, ಇತ್ತ ರಾಯ್ ಬರೇಲಿ ಮತ್ತು ವಯನಾಡ್ ನಿಂದ ರಾಹುಲ್ ಗಾಂಧಿ ಸ್ಪರ್ಧಿಸಿರುವ ಹಿನ್ನೆಲೆ ಅಮೇಥಿಯಿಂದ ಕಾಂಗ್ರೆಸ್ ಅಭ್ಯರ್ಥಿ ಯಾರು ಎನ್ನುವ ಚರ್ಚೆ ಹುಟ್ಟು ಹಾಕಿದೆ. ಅಲ್ಲದೇ ಕಾಂಗ್ರೆಸ್ ಕೂಡಾ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸದೆ ಕುತೂಹಲ ಹೆಚ್ಚಿಸಿತ್ತು.
ಈ ನಡುವೆ ರಾಯ್ ಬರೇಲಿಯಿಂದ ಪ್ರಿಯಾಂಕಾ ಗಾಂಧಿ ಹಾಗೂ ಅಮೇಥಿಯಿಂದ ರಾಬರ್ಟ್ ವಾದ್ರಾ ಸ್ಪರ್ಧಿಸುವ ಚರ್ಚೆಗಳು ಕೇಳಿ ಬಂದಿತ್ತು. ಅವರ ಬ್ಯಾನರ್ ಪೋಸ್ಟರ್ ಗಳನ್ನು ಕಾರ್ಯಕರ್ತರು ಕ್ಷೇತ್ರದಲ್ಲಿ ಹಾಕಿದ್ದರು. ಅಮೇಥಿಯಿಂದ ನನ್ನ ಸ್ಪರ್ಧೆಯನ್ನು ಜನರು ಬಯಸಿದ್ದಾರೆ ಎಂದು ಖುದ್ದು ರಾಬರ್ಟ್ ವಾದ್ರಾ ಹೇಳಿಕೆ ನೀಡಿದ್ದರು.
1960 ರಿಂದ ರಾಯ್ ಬರೇಲಿ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದೆ. ಫಿರೋಜ್ ಗಾಂಧಿ, ಇಂದಿರಾ ಗಾಂಧಿ ಕೂಡಾ ಇಲ್ಲಿಂದ ಸ್ಪರ್ಧಿಸಿದ್ದರು. 2006 ರಿಂದ ಸೋನಿಯಾ ಗಾಂಧಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಸೋನಿಯಾ ಗಾಂಧಿ ರಾಜ್ಯಸಭೆ ಆಯ್ಕೆ ಬಳಿಕ ಪ್ರಿಯಾಂಕಾ ಗಾಂಧಿ ಪ್ರಬಲ ಸ್ಪರ್ಧಿಯಾಗಿದ್ದಾರೆ. ಆದರೆ ಅಮೇಥಿಯಲ್ಲಿ ಕಳೆದ ಬಾರಿ ರಾಹುಲ್ ಗಾಂಧಿ ಸೋಲನ್ನಪ್ಪಿದ್ದು ಈ ಬಾರಿಯೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರಬಲ ಸ್ಪರ್ಧೆ ನೀಡುತ್ತಿರುವ ಹಿನ್ನೆಲೆ ರಾಹುಲ್ ಗಾಂಧಿಗೆ ಕಷ್ಟಕರವಾಗಿದೆ.