Friday, December 09, 2022

ರಾಹುಲ್ ಗಾಂಧಿ, ಹೆಚ್ ಡಿಕೆ ಭೇಟಿಯಾದ ಬಿಹಾರ ಸಿಎಂ ನಿತೀಶ್ ಕುಮಾರ್

ರಾಷ್ಟ್ರೀಯ

ನವದೆಹಲಿ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ದೆಹಲಿಯಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಬಿಹಾರದಲ್ಲಿ ಎನ್‍ಡಿಎ ಜೊತೆಗಿನ ಮೈತ್ರಿ ಸರ್ಕಾರ ಉರುಳಿಸಿ ಆರ್‌ಜೆಡಿ, ಕಾಂಗ್ರೆಸ್ ಮತ್ತು ಎಡಪಕ್ಷಗಳೊಂದಿಗೆ ಜೆಡಿಯು ಸರ್ಕಾರ ರಚನೆಯಾದ ನಂತರ ನಿತೀಶ್ ಕುಮಾರ್ ಸಿಎಂ ಆಗಿ 8ನೇ ಬಾರಿ ಸಿಎಂ ಆಗಿ ಅಧಿಕಾರಕ್ಕೇರಿದ್ದರು. ಆ ಬಳಿಕ ಇದೀಗ ಮೊದಲ ಬಾರಿಗೆ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ.  ಉಭಯ ಮುಖಂಡರು ದೇಶದಲ್ಲಿನ ಪ್ರಸ್ತುತ ರಾಜಕೀಯ ಬೆಳವಣಿಗೆ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ಪ್ರತಿಪಕ್ಷಗಳ ಮೈತ್ರಿ ಹಾದಿ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಇಂದು ದೆಹಲಿಗೆ ಆಗಮಿಸಿದ ನಿತೀಶ್ ಕುಮಾರ್, ರಾಹುಲ್ ಗಾಂಧಿ ಭೇಟಿ ಬಳಿಕ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದಾರೆ. ಹೆಚ್.ಡಿ.ದೇವೇಗೌಡ ಅವರ ನಿವಾಸದಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಹಲವು ವಿಚಾರ ಕುರಿತು ಚರ್ಚೆ ನಡೆಸಿದ್ದಾರೆ.

2024ರ ಲೋಕಸಭೆ ಚುನಾವಣೆಗೆ ಬಿಜೆಪಿ ವಿರುದ್ಧ ಎಲ್ಲಾ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಕಾರ್ಯದಲ್ಲಿ ನಿತೀಶ್ ಕುಮಾರ್ ನಿರತರಾಗಿದ್ದಾರೆ. ಈ ನಿಟ್ಟಿನಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಪ್ರತಿಪಕ್ಷಗಳ ಹಲವು ಮುಖಂಡರನ್ನು ಭೇಟಿಯಾಗುತ್ತಿದ್ದಾರೆ ಎಂದು ಮೂಲಗಳಿಂದ ವರದಿಯಾಗಿದೆ.

Leave a Reply

Your email address will not be published. Required fields are marked *