ನವದೆಹಲಿ;- ದ್ವೇಷ ನಿರ್ಮೂಲನೆವರೆಗೆ ಭಾರತ್ ಜೋಡೋ ಯಾತ್ರೆ ಮುಂದುವರಿಸಲಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ದೇಶದಿಂದ ದ್ವೇಷ ನಿಮೂಲವಾಗಿ ಭಾರತ ಒಗ್ಗಟ್ಟಾಗುವವರೆಗೆ ಭಾರತ್ ಜೋಡೋ ಯಾತ್ರೆಯನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.
ಏಕತೆ ಮತ್ತು ಪ್ರೀತಿಯತ್ತ ಭಾರತ್ ಜೋಡೋ ಯಾತ್ರೆಯ ಕೋಟ್ಯಂತರ ಹೆಜ್ಜೆಗಳು ದೇಶದ ಉತ್ತಮ ನಾಳೆಗಾಗಿನ ಅಡಿಪಾಯ ಆಗಿವೆ’ ಎಂದು ಹೇಳಿರುವ ಗಾಂಧಿ, ಯಾತ್ರೆಯನ್ನು ಮುಂದುವರಿಸುವುದು ತಮ್ಮ ಆಶ್ವಾಸನೆಯಾಗಿದೆ ಎಂದು ಶಪಥ ಮಾಡಿದ್ದಾರೆ. ದೇಶದ ಗಮನ ಸೆಳೆದ ಭಾರತ್ ಜೋಡೋ ಯಾತ್ರೆಯ ವೇಳೆ ಗಾಂಧಿ 12 ಸಾರ್ವಜನಿಕ ಸಭೆಗಳು, 100ಕ್ಕೂ ಅಧಿಕ ಬೀದಿ ಬದಿ ಸಭೆಗಳು ಮತ್ತು 13 ಮಾಧ್ಯವಮ ಗೋಷ್ಠಿಗಳಲ್ಲಿ ಮಾತನಾಡಿದ್ದರು. ಯಾತ್ರೆಯಲ್ಲಿ ನಡೆಯುತ್ತಲೇ 275ಕ್ಕೂ ಹೆಚ್ಚು ಹಾಗೂ ಕುಳಿತುಕೊಂಡು 100ಕ್ಕೂ ಹೆಚ್ಚು ಸಂವಾದಗಳನ್ನು ಕೂಡ ನಡೆಸಿದ್ದರು.
ಇನ್ನೂ ಒಬ್ಬ ಅರೆಮನಸ್ಸಿನ ಹಾಗೂ ಪಾರ್ಟ್ಟೈಂ ರಾಜಕಾರಣಿ ಯಿಂದ ಒಬ್ಬ ಪ್ರಬುದ್ಧ ರಾಜಕಾರಣಿಯಾಗಿ ಗಾಂಧಿಯ ವ್ಯಕ್ತಿತ್ವ ಪರಿವರ್ತನೆ ಗೊಂಡಿದ್ದು ಕಾಂಗ್ರೆಸ್ಗೆ ಈ ಯಾತ್ರೆಯಿಂದ ಸಿಕ್ಕ ದೊಡ್ಡ ಲಾಭವಾಗಿದೆ ಎಂದು ಅನೇಕ ತಜ್ಞರು ವ್ಯಾಖ್ಯಾನಿಸಿದ್ದಾರೆ. 4,000 ಕಿಮೀ ಯಾತ್ರೆಯುದ್ದಕ್ಕೂ ಬೆಂಬಲಿಗರು ಮಾತ್ರವಲ್ಲದೆ, ವಿರೋಧಿಗಳ ಗಮನವನ್ನು ಸೆಳೆಯುವಲ್ಲಿಯೂ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷರೂ ಆದ ಗಾಂಧಿ ಯಶಸ್ವಿಯಾಗಿದ್ದರು.