ನವದೆಹಲಿ: ಇಲ್ಲಿ ಸಾಲ ಕೊಡಲಾಗುವುದಿಲ್ಲ. ಉದ್ರಿ ವ್ಯವಹಾರ ಇಲ್ಲಿ ಮಾಡಲಾಗುವುದಿಲ್ಲ. ಇನ್ನೂ ಕೆಲವು ಕಡೆ ಸಾಲ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ, ಗ್ರಾಹಕರು ದೇವರಿದ್ದಂತೆ, ದೇವರಿಗೆ ಸಾಲ ಕೊಡವಷ್ಟು ದೊಡ್ಡವನಲ್ಲ ಎಂದು ಬೋರ್ಡ್ ಹಾಕಿಕೊಳ್ಳುತ್ತಾರೆ. ಆದರೆ ಮಧ್ಯಪ್ರದೇಶದ ವ್ಯಾಪಾರಿಯೊಬ್ಬ ರಾಹುಲ್ ಪ್ರಧಾನ ಮಂತ್ರಿಯಾಗುವವರೆಗೆ ಸಾಲ ಕೇಳಬೇಡಿ ಎಂಬ ಬೋರ್ಡ್ ಹಾಕಿಕೊಂಡಿದ್ದಾರೆ.
ಚಿಲ್ಲರೆ ವ್ಯಾಪಾರಿ ಅಂಗಡಿ, ಹೊಟೇಲ್ಗಳಲ್ಲಿ, ಸಾಲ ಕೇಳುವ ಗ್ರಾಹಕರಿಗೆಂದೇ, ನಾನಾ ರೀತಿಯ ಬೋರ್ಡ್ ಗಳು, ಬರೆದು ಸಾಲ ಕೊಡುವುದನ್ನ ತಪ್ಪಿಸಿಕೊಳ್ಳುವುದಕ್ಕೆ ಪ್ರಯತ್ನ ಪಡುತ್ತಾರೆ. ಆದರೆ ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿರುವ ಪಾನ್ ಶಾಪ್ನಲ್ಲಿ ಬರೆದಿರುವ ಸಾಲುಗಳನ್ನ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಈಗ ಅದೇ ಸಾಲುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಾಹುಲ್ ಗಾಂಧಿ ದೇಶದ ಪ್ರಧಾನಿಯಾಗುವವರೆಗೆ ತಾನೂ ಯಾರಿಗೂ ಸಾಲವನ್ನು ಕೊಡುವುದಿಲ್ಲ ಎಂದು ಪಾನ್ ಶಾಪ್ ಅಂಗಡಿ ಮಾಲೀಕ ಬೋರ್ಡ್ ಹಾಕಿಕೊಂಡಿದ್ದಾನೆ. ಇದೇ ಸಾಲುಗಳು ಈಗ ಎಲ್ಲರ ಗಮನ ಸೆಳೆದಿದೆ. ಇದೇ ಸಾಲುಗಳ ಫೋಟೋ ತೆಗೆದು ವ್ಯಕ್ತಿಯೊಬ್ಬರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನೆಟ್ಟಿಗರು ಈ ಸಾಲುಗಳನ್ನ ಓದಿ ಎಂಜಾಯ್ ಮಾಡುತ್ತಿದ್ದಾರೆ.
ಸಾಮಾನ್ಯವಾಗಿ ಜನರು ತಮ್ಮ ನೆಚ್ಚಿನ ನಾಯಕ ಮುಖ್ಯಮಂತ್ರಿಯಾಗಲಿ, ಪ್ರಧಾನ ಮಂತ್ರಿಯಾಗಲಿ ಎಂದು ಚಪ್ಪಲಿ ಹಾಕುವುದಿಲ್ಲ, ತಲೆ ಕೂದಲು ಬೋಳಿಸುವುದಿಲ್ಲ ಎಂದು ಹರಕೆ ಹೊರುವವರನ್ನ ನೋಡಿದ್ದೇವೆ. ಆದರೆ ಈ ವ್ಯಕ್ತಿ ಸಾಲವನ್ನೇ ಕೊಡುವುದಿಲ್ಲ ಎಂದು ಬೋರ್ಡ್ ಹಾಕಿದ್ದಾರೆ. ನೆಟ್ಟಿಗರು ಈ ಸಾಲಿಗೆ ನಾನಾ ಅರ್ಥಗಳನ್ನ ಕೊಟ್ಟಿದ್ದಾರೆ. ಅನೇಕರ ಪ್ರಕಾರ ರಾಹುಲ್ ಗಾಂಧಿ ನಿರೀಕ್ಷೆಯಿಲ್ಲ ಎಂದು ಅಂಗಡಿ ಮಾಲೀಕ ಮೊಹಮ್ಮದ್ ಹುಸೇನ್ ಭಾವಿಸಿರಬಹುದು. ಈ ಬೋರ್ಡ್ ಮೂಲಕ ಸಾಲದ ವಹಿವಾಟು ನಿಲ್ಲಿಸಿ ಕೇವಲ ನಗದು ವಹಿವಾಟುಗಳನ್ನು ಉತ್ತೇಜಿಸುವುದಕ್ಕೆ ಈ ಪ್ಲಾನ್ ಮಾಡಿದ್ದಾರೆ ಎಂದು ಹೇಳಿದ್ದಾರೆ.