ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಎರಡು ದಿನಗಳ ಪ್ರವಾಸಕ್ಕೆ ರಾಜ್ಯಕ್ಕೆ ಭಾನುವಾರ ಆಗಮಿಸಲಿದ್ದು, ಮೊದಲ ದಿನ ಕೋಲಾರದಲ್ಲಿ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಕೋಲಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ ನೇಮ್ ಕುರಿತಾಗಿ ಮಾಡಿದ್ದ ಭಾಷಣ ಅವರ ಸಂಸತ್ ಸದಸ್ಯತ್ವ ಅನರ್ಹಕ್ಕೆ ಕಾರಣವಾಗಿತ್ತು. ಇದೀಗ ಕೋಲಾರದಲ್ಲೇ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ರಾಹುಲ್ ಭಾಗಿಯಾಗಲಿದ್ದು, ಈ ಮೂಲಕ ಕರ್ನಾಟಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ.
ಭಾನುವಾರ ಮಧ್ಯಾಹ್ಮ 12. 05 ಕ್ಕೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಹುಲ್ ಆಗಮಿಸಲಿದ್ದಾರೆ. 12. 25 ಕ್ಕೆ ಕೋಲಾರಕ್ಕೆ ಆಗಮಿಸಿ ಅಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಅವರು ಭಾಗಿಯಾಗಲಿದ್ದಾರೆ. ಬಳಿಕ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಪೌರಕಾರ್ಮಿಕರು ಹಾಗೂ ಬೀದಿ ಬದಿ ವ್ಯಾಪಾರಸ್ತರ ಜೊತೆಗೆ ಸಂವಾದ ನಡೆಸಲಿದ್ದಾರೆ.
ಬಳಿಕ ನೂತನವಾಗಿ ನಿರ್ಮಾಣವಾಗಿರುವ ಕಾಂಗ್ರೆಸ್ ಕಚೇರಿ ಇಂದಿರಾ ಭವನವನ್ನು ಅವರು ಉದ್ಘಾಟನೆ ಮಾಡಲಿದ್ದಾರೆ. ಭಾನುವಾರ ರಾತ್ರಿ ಬೆಂಗಳೂರಿನಲ್ಲೇ ಉಳಿದುಕೊಳ್ಳಲಿರುವ ಅವರು, ಸೋಮವಾರ ಬೀದರ್ಗೆ ತೆರಳಿ, ಬೀದರ್ ನ ಭಾಲ್ಕಿಯಲ್ಲಿ ನಡೆಯಲಿರುವ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ನಂತರದಲ್ಲಿ ಹುಮ್ನಾಬಾದ್ ಅಭ್ಯರ್ಥಿ ರಾಜಶೇಖರ್ ಪಾಟೀಲ್ ಪರವಾಗಿಯೂ ಸಾರ್ವಜನಿಕ ಸಮಾವೇಶದಲ್ಲಿ ಮತಯಾಚನೆ ಮಾಡಲಿದ್ದಾರೆ. ಬಳಿಕ ಹೈದರಾಬಾದ್ ಮೂಲಕ ರಾಹುಲ್ ದೆಹಲಿಗೆ ವಾಪಸ್ ತೆರಳಲಿದ್ದಾರೆ.
ಭೇಟಿ ನಂತರ ಕೋಲಾರಕ್ಕೆ ಅಭ್ಯರ್ಥಿ ಘೋಷಣೆ?
ಈಗಾಗಲೇ ವರುಣಾದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಕೋಲಾರದಿಂದಲೂ ಸ್ಪರ್ಧಿಸಲು ಅವಕಾಶ ಕೊಡಬೇಕೆಂದು ಕಾಂಗ್ರೆಸ್ ಹೈಕಮಾಂಡ್ ಅನ್ನು ಕೇಳಿದ್ದಾರೆ. ಆದರೆ, ಅದಕ್ಕೆ ಹೈಕಮಾಂಡ್ ಇನ್ನೂ ಒಪ್ಪಿಗೆ ಕೊಟ್ಟಿಲ್ಲ. ಹಾಗಾಗಿ, ಕಾಂಗ್ರೆಸ್ ನಿಂದ ಬಿಡುಗಡೆಯಾದ ಅಭ್ಯರ್ಥಿಗಳ ಪಟ್ಟಿಗಳಲ್ಲಿ ಕೋಲಾರದ ಅಭ್ಯರ್ಥಿ ಘೋಷಣೆಯಾಗಿಲ್ಲ. ಕೋಲಾರಕ್ಕೆ ರಾಹುಲ್ ಭೇಟಿ ಬಳಿಕ ಕೋಲಾರ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಹಾಗಾಗಿ, ಈಗ ರಾಹುಲ್ ಬರುತ್ತಿರುವ ಹಿನ್ನೆಲೆಯಲ್ಲಿ ಕೋಲಾರ ಅಭ್ಯರ್ಥಿಯ ಘೋಷಣೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.