ಲಕ್ನೋ ಕಾಂಗ್ರೆಸ್ ಸಂಸದ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಉತ್ತರ ಪ್ರದೇಶದಲ್ಲಿ ಚಪ್ಪಲಿ ಹೊಲಿಯುವ ಚಮ್ಮಾರನ ಅಂಗಡಿಗೆ ಭೇಟಿ ನೀಡುವ ಮೂಲಕ ಮತ್ತೊಮ್ಮೆ ಗಮನಸೆಳೆದಿದ್ದಾರೆ.ತಮ್ಮ ವಿರುದ್ಧದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಸುಲ್ತಾನ್ಪುರದಲ್ಲಿರುವ ಸಂಸದರು ಮತ್ತು ಶಾಸಕರ ನ್ಯಾಯಾಲಯಕ್ಕೆ ಹಾಜರಾಗಿ ವಾಪಸ್ ಲಕ್ನೋಗೆ ತೆರಳುವ ವೇಳೆ ರಸ್ತೆ ಬದಿಯಲ್ಲಿದ್ದ ಚಮ್ಮಾರ ರಾಮ್ ಚೈತ್ ಎಂಬವರ ಅಂಗಡಿಗೆ ರಾಗಾ ದಿಢೀರ್ ಭೇಟಿ ನೀಡಿದ್ದಾರೆ.
ಅಲ್ಲದೇ ಚಮ್ಮಾರನ ನಿರ್ದೇಶನದಂತೆ ಚಪ್ಪಲಿಯನ್ನು ಸರಿಪಡಿಸುವ ಪ್ರಯತ್ನವನ್ನೂ ರಾಹುಲ್ ಗಾಂಧಿ ಮಾಡಿದ್ದಾರೆ. ಚಮ್ಮಾರ ರಾಮ್ ಚೈತ್ ಈ ಅಂಗಡಿಯಲ್ಲಿ ಕಳೆದ 40 ವರ್ಷಗಳಿಂದ ಪಾದರಕ್ಷೆಗಳನ್ನು ತಯಾರಿಸುತ್ತಿದ್ದಾರೆ. ರಾಹುಲ್ ಗಾಂಧಿ ಈ ಅಂಗಡಿಯಲ್ಲಿ ಸುಮಾರು 30 ನಿಮಿಷಗಳ ಕಾಲ ರಾಮ್ ಚೈತ್ ಜೊತೆ ಕಾಲ ಕಳೆದು ಮಾತುಕತೆ ನಡೆಸಿದ್ದಾರೆ.
ಅಲ್ಲದೇ ಕಷ್ಟಸುಖಗಳನ್ನೂ ಆಲಿಸಿದ್ದಾರೆ. ಇದಾದ ಬಳಿಕ ಇಬ್ಬರೂ ಪಾನೀಯ ಸೇವಿಸಿದ್ದಾರೆ. ಈ ವೇಳೆ ರಾಹುಲ್ ಗಾಂಧಿ ರಾಮ್ ಚೈತ್ ಅವರ ಸಮಸ್ಯೆಗಳನ್ನು ಪರಿಹರಿಸಲು ಬೇಕಾಗುವ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.