ಬಾಗಲಕೋಟೆ: ಭಾನುವಾರ ವಿಶ್ವಗುರು ಬಸವಣ್ಣನವರ ಜಯಂತಿ. ಲಿಂಗಾಯತರ ಪುಣ್ಯಕ್ಷೇತ್ರದಲ್ಲಿ ಮಹಾನ್ ಮಾನವತವಾದಿಯ ಜಯಂತಿ ಆಚರಣೆ ಅದ್ದೂರಿ ಆಗಿರುತ್ತದೆ. ಹೀಗಿರುವಾಗ ಜಯಂತಿ ಆಚರಣೆಯಲ್ಲಿ ಭಾಗಿಯಾಗಲು ಕಾಂಗ್ರೆಸ್ ನಾಯಕ ಬರಲಿದ್ದಾರೆ. ಚುನಾವಣೆ ವೇಳೆಯಲ್ಲಿ ರಾಹುಲ್ ಗಾಂಧಿ (Rahul Gandhi) ಲಿಂಗಾಯತರ ಪುಣ್ಯಕ್ಷೇತ್ರಕ್ಕೆ ಬರುತ್ತಿರುವುದು ಕುತೂಹಲ ಹೆಚ್ಚಿಸಿದೆ. ಅಲ್ಲದೇ ರಾಜ್ಯ ರಾಜಕೀಯ ಲೆಕ್ಕಾಚಾರ ಶುರುವಾಗಿದೆ. ಬಸವ ಜಯಂತಿ (Basava Jayanti) ಹಿನ್ನೆಲೆ ಬಸವಣ್ಣ ಐಕ್ಯವಾಗಿರುವ ಕೂಡಲಸಂಗಮ ಕ್ಷೇತ್ರದಲ್ಲಿ ಬಸವ ಉತ್ಸವ ಸಮಿತಿ ವತಿಯಿಂದ ಜಯಂತಿ ಕಾರ್ಯಕ್ರಮವನ್ನು ಏರ್ಪಡಿಸಲು ಸಕಲ ಸಿದ್ಧತೆ ಆಗಿದೆ.
ರಾಹುಲ್ ಗಾಂಧಿ(Rahul Gandhi) ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬಸವಣ್ಣನವರ ಐಕ್ಯ ಸ್ಥಳಕ್ಕೆ ರಾಹುಲ್ ಗಾಂಧಿ(Rahul Gandhi) ಭೇಟಿ ನೀಡಲಿದ್ದಾರೆ. ಬಳಿಕ ಸಂಗಮನಾಥನ ದರ್ಶನ ಕೂಡಾ ಮಾಡಲಿದ್ದಾರೆ. ದರ್ಶನದ ಬಳಿಕ ಬಸವ ಮಂಟಪದಲ್ಲಿ ಬಸವ ಉತ್ಸವ ಸಮಿತಿ ಆಯೋಜಿಸಿರುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕಾರ್ಯಕ್ರಮ ಬಳಿಕ ಮಧ್ಯಾಹ್ನ 2:15 ರಿಂದ 4:15 ರವರೆಗೆ ಯಾತ್ರಿ ನಿವಾಸದಲ್ಲಿ ಪಕ್ಷದ ನಾಯಕರ ಜೊತೆ ಆಂತರಿಕ ಸಭೆ ಮಾಡಲಿದ್ದಾರೆ. ರಾಹುಲ್ ಗಾಂಧಿಗೆ ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ ಸೇರಿದಂತೆ ಹಲವು ನಾಯಕರು ಸಾಥ್ ನೀಡಲಿದ್ದಾರೆ.
ರಾಹುಲ್ ಗಾಂ(Rahul Gandhi)ಧಿ ಕಾರ್ಯಕ್ರಮದಲ್ಲಿ ಬಾಲ್ಕಿಯ ಬಸವಲಿಂಗ ಪಟ್ಟದೇವರು, ಗದಗಿನ ತೋಂಟದಾರ್ಯ ಮಠದ ಸಿದ್ದರಾಮ ಸ್ವಾಮೀಜಿ, ಇಳಕಲ್ ಮಹಾಂತ್ ಮಠದ ಗುರುಮಹಾಂತ್ ಶ್ರೀಗಳು, ಬಸವಧರ್ಮ ಪೀಠದ ಮಾದೇಶ್ವರ ಸ್ವಾಮೀಜಿ ಭಾಗಿಯಾಗಲಿದ್ದಾರೆ. ಲಿಂಗಾಯತ ಮುಖಂಡರ ಜೊತೆ ರಾಹುಲ್ ಗಾಂಧಿ ಸಭೆ ನಡೆಯೋ ಸಾಧ್ಯತೆ ಸಹ ಇದೆ. ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಎರಡೂ ರಾಷ್ಟ್ರೀಯ ಪಕ್ಷಗಳು ಲಿಂಗಾಯತರ ಮತಬುಟ್ಟಿಗೆ ಕೈ ಹಾಕಲು ನಾನಾ ರಣತಂತ್ರ ರೂಪಿಸುತ್ತಿವೆ. ಇದೀಗ ಬಸವ ಜಯಂತಿಯಲ್ಲೂ ಸಹ ರಾಜಕೀಯ ಪಕ್ಷಗಳು ಲಾಭ ನಷ್ಟದ ಲೆಕ್ಕಾಚಾರದಲ್ಲಿ ತೊಡಗಿದೆ.