ನವದೆಹಲಿ: ಲ್ಯಾಟರಲ್ ಎಂಟ್ರಿ ಮೂಲಕ ಸರ್ಕಾರಿ ನೌಕರರನ್ನು ನೇಮಕ ಮಾಡಿಕೊಳ್ಳುವ ಮೂಲಕ ಕೇಂದ್ರ ಸರ್ಕಾರ ದೇಶ ವಿರೋಧಿ ನಿರ್ಧಾರ ಕೈಗೊಂಡಿದೆ ಎಂದು ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿಕೆಯ ಬೆನ್ನಲ್ಲೇ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ತಿರುಗೇಟು ನೀಡಿದ್ದಾರೆ.
ಲ್ಯಾಟರಲ್ ಎಂಟ್ರಿ ವಿಷಯದಲ್ಲಿ ಕಾಂಗ್ರೆಸ್ ಬುಟಾಟಿಕೆ ಪ್ರದರ್ಶಿಸುತ್ತಿವುದು ಸ್ಪಷ್ಟವಾಗಿದೆ. ಲ್ಯಾಟರಲ್ ಎಂಟ್ರಿ ಪರಿಕಲ್ಪನೆಯನ್ನು ಪರಿಚಯಿಸಿದ್ದೇ ಯುಪಿಎ ಸರ್ಕಾರ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಈ ಸಂಬಂಧ ಎಕ್ಸ್ನಲ್ಲಿ ಪೋಸ್ಟ್ ಹಾಕಿದ ಅವರು, 2005 ರಲ್ಲಿ ಯುಪಿಎ ಸರ್ಕಾರ ವೀರಪ್ಪ ಮೊಯ್ಲಿ ಅಧ್ಯಕ್ಷತೆಯಲ್ಲಿ ಎರಡನೇ ಆಡಳಿತ ಸುಧಾರಣಾ ಆಯೋಗವನ್ನು ಸ್ಥಾಪಿಸಲಾಗಿತ್ತು.
ಆಡಳಿತ ಸುಧಾರಣಾ ಆಯೋಗ ಮಹತ್ವದ ಹುದ್ದೆಗಳಿಗೆ ಪರಿಣಿತಿ ಹೊಂದಿರುವ ತಜ್ಞರ ನೇಮಕಾತಿಯನ್ನು ಮಾಡುವಂತೆ ಶಿಫಾರಸು ಮಾಡಿತ್ತು. ಈ ಶಿಫಾರಸನ್ನು ಜಾರಿಗೊಳಿಸಲು ಎನ್ಡಿಎ ಸರ್ಕಾರ ಪಾರದರ್ಶಕ ವಿಧಾನವನ್ನು ರಚಿಸಿದೆ. ಯುಪಿಎಸ್ಸಿ ಮೂಲಕ ಪಾರದರ್ಶಕವಾಗಿ ಮತ್ತು ನ್ಯಾಯಯುತವಾಗಿ ನೇಮಕಾತಿ ನಡೆಯಲಿದೆ. ಈ ಸುಧಾರಣೆಯು ಆಡಳಿತವನ್ನು ಸುಧಾರಿಸುತ್ತದೆ ಎಂದು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.