ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಮಳೆ ಅವಾಂತರದಿಂದ ಶಾಲೆಗೆ ಮಳೆ ನೀರು ನುಗ್ಗಿದೆ. ಚಾಮರಾಜನಗರ ತಾಲ್ಲೂಕಿನ ವೆಂಕಟಯ್ಯನ ಛತ್ರ ಗ್ರಾಮದಲ್ಲಿ ಚರಂಡಿ ನೀರು ಶಾಲೆಗೆ ನುಗ್ಗಿದ್ದು, ಭಾನುವಾರ ಸುರಿದ ಧಾರಾಕಾರ ಮಳೆಗೆ ಚರಂಡಿ ನೀರು ರಸ್ತೆಗೆ ಹರಿದಿದೆ. ಅಲ್ಲದೆ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನ ಹಾಗೂ ಕೆಸರುಮಯವಾಗಿದೆ.
ಅವೈಜ್ಞಾನಿಕ ಚರಂಡಿ ಕಾಮಗಾರಿಯಿಂದ ಕಾಲೇಜು ಆವರಣ ಸಂಪೂರ್ಣ ಜಲಾವೃತವಾಗಿದೆ. ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಿಸಿರುವ ಚರಂಡಿ ಕಾಮಗಾರಿ ಅವೈಜ್ಞಾನಿಕ ಹಾಗೂ ಅಪೂರ್ಣವಾಗಿದೆ. ಹಾಗಾಗಿ ಗ್ರಾಮದ ಕೊಳಚೆ ನೀರು ಮೈದಾನವನ್ನು ತುಂಬಿಕೊಂಡಿದೆ. ಚರಂಡಿಯಲ್ಲಿ ತುಂಬಿದ್ದ ಮದ್ಯದ ಬಾಟಲಿ, ಪ್ಲಾಸ್ಟಿಕ್ ಪದಾರ್ಥಗಳು ರಾಶಿಗಟ್ಟಲೇ ಹರಿದುಬಂತು. ಇದೀಗ ಶಾಲಾ ಆವರಣವು ಸೊಳ್ಳೆಗಳ ಆವಾಸ ಸ್ಥಾನವಾಗಿದೆ. ಕಾಲೇಜು ಪಕ್ಕದಲ್ಲೇ ಇರುವ ಪ್ರಾಥಮಿಕ ಆಸ್ಪತ್ರೆಗೆ ಬರುವ ರೋಗಿಗಳು ಮೂಗು ಮುಚ್ಚಿಕೊಂಡು ತಿರುಗಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಇನ್ನಾದರೂ ಚರಂಡಿ ಕಾಮಗಾರಿ ಪೂರ್ಣಗೊಳಿಸಿ ಸ್ಥಳೀಯರಿಗೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.