ರಾಜ್ಯದಲ್ಲಿ ಬಿರು ಬೇಸಿಗೆ ಹೊತ್ತಲ್ಲಿ ಎದುರಾಗಿರುವ ಚುನಾವಣೆಯನ್ನು ಸಮರ್ಥವಾಗಿ ನಿಭಾಯಿಸಲು ಚುನಾವಣಾ ಆಯೋಗ ಸಕಲ ಸಿದ್ದತೆಗಳನ್ನೂ ಕೈಗೊಂಡಿದೆ. ಆದ್ರೆ, ಮತದಾನ ನಡೆಯುವ ದಿನ ಮೇ 10 ಬುಧವಾರ ಸೇರಿದಂತೆ ಹಲವು ದಿನಗಳ ಕಾಲ ರಾಜ್ಯಾದ್ಯಂತ ಮಳೆಯಾಗುವ ನಿರೀಕ್ಷೆ ಇದೆ. ಹಲವೆಡೆ ಭಾರೀ ಮಳೆ ಸುರಿಯುವ ಸಾಧ್ಯತೆಯೂ ಇದೆ. ಹೀಗಾಗಿ, ಚುನಾವಣಾ ಸಿದ್ದತೆಯಲ್ಲಿ ತೊಡಗಿರುವ ಆಯೋಗಕ್ಕೆ ತಲೆನೋವಾಗಿದೆ.
ಇದಕ್ಕೆ ಪೂರಕ ಎಂಬಂತೆ ಹವಾಮಾನ ಇಲಾಖೆ ಕೂಡಾ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಳದಿ ಅಲರ್ಟ್ (ಯೆಲ್ಲೋ ಅಲರ್ಟ್) ಜಾರಿ ಮಾಡಿದೆ. ಈ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಗುಡುಗು, ಮಿಂಚಿನ ಸಮೇತ ಭಾರೀ ಮಳೆ ಆಗಲಿದೆ ಎಂದು ಮುನ್ಸೂಚನೆ ನೀಡಿದೆ. ಹೀಗಾಗಿ, ಇವಿಎಂಗಳ ಹಂಚಿಕೆ, ಚುನಾವಣಾ ಸಿಬ್ಬಂದಿ ಮತಗಟ್ಟೆಗಳಿಗೆ ರವಾನೆ ಮಾಡುವ ಪ್ರಕ್ರಿಯೆ ಹಾಗೂ ಚುನಾವಣಾ ಸಾಮಗ್ರಿಗಳ ಸಾಗಾಟಕ್ಕೆ ಅಡಚಣೆ ಎದುರಾಗುವ ಸಾಧ್ಯತೆಗಳು ಇವೆ.
ಚುನಾವಣೆಗೆ ಸಿದ್ದತೆ ನಡೆಸುತ್ತಿದ್ದ ಆಯೋಗಕ್ಕೆ ಮತದಾನ ಹಾಗೂ ಮತ ಎಣಿಕೆ ದಿನ ಮಳೆ ಬರಬಹುದು ಎಂಬ ಯಾವ ಸೂಚನೆಯೂ ಇರಲಿಲ್ಲ ಎನ್ನುತ್ತಾರೆ, ಚುನಾವಣಾ ಕೆಲಸ ಕಾರ್ಯಗಳಿಗೆ ನಿಯೋಜನೆ ಆಗಿರುವ ಹಿರಿಯ ಅಧಿಕಾರಿಗಳು. ಈ ಕುರಿತಾಗಿ ವಿಜಯ ಕರ್ನಾಟಕ ವೆಬ್ ಸಹೋದರ ಸಂಸ್ಥೆ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿರುವ ಅಧಿಕಾರಿಗಳು, ‘ಮೋಚಾ’ ಚಂಡಮಾರುತದ ಪರಿಣಾಮ ರಾಜ್ಯದ ಮೇಲೂ ಆಗಬಹುದು ಎಂಬ ಸೂಚನೆ ಇದೀಗ ಸಿಕ್ಕಿದೆ. ಅದರಲ್ಲೂ ಚಂಡ ಮಾರುತದಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ಹೀಗಾಗಿ ನಾವು ಚುನಾವಣಾ ಸಿದ್ದತೆಗೆ ಸೂಕ್ತ ಬದಲಿ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಅದರಲ್ಲೂ ಇವಿಎಂ ಹಾಗೂ ವಿವಿ ಪ್ಯಾಟ್ ಯಂತ್ರಗಳು ಸೇರಿದಂತೆ ಹಲವು ಎಲೆಕ್ಟ್ರಾನಿಕ್ ಸಾಧನಗಳನ್ನು ಮಳೆಯಲ್ಲಿ ನೆನೆಯದಂತೆ ಸುರಕ್ಷಿತವಾಗಿ ಮತಗಟ್ಟೆಗಳಲ್ಲಿ ಸಾಗಣೆ ಮಾಡುವ ಹಾಗೂ ಮತದಾನದ ಬಳಿಕ ಸುರಕ್ಷಿತವಾಗಿ ಸ್ಟ್ರಾಂಗ್ ರೂಂಗೆ ರವಾನೆ ಮಾಡುವ ಕೆಲಸ ಆಗಬೇಕಿದೆ. ಇದಕ್ಕಾಗಿ ಆಯೋಗ ಸಕಲ ಮುನ್ನೆಚ್ಚರಿಕಾ ಕ್ರಮಗಳನ್ನೂ ಕೈಗೊಳ್ಳುತ್ತಿದೆ.
ಮಳೆ ಮುನ್ಸೂಚನೆ ಹಾಗೂ ಚುನಾವಣಾ ಸಿದ್ದತೆ ಕುರಿತಾಗಿ ಮಾಹಿತಿ ನಿಡಿರುವ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಮೀನಾ, ಅಂತಿಮ ಹಂತದವರೆಗೂ ನಾವು ಮಳೆ ಬರುವ ಸಾಧ್ಯತೆ ಕುರಿತಾಗಿ ಯೋಚನೆಯನ್ನೇ ಮಾಡಿರಲಿಲ್ಲ ಎನ್ನುತ್ತಾರೆ. ಇದು ಬೇಸಿಗೆ ಸಮಯವಾದ ಹಿನ್ನೆಲೆಯಲ್ಲಿ ನಾವು ಮಳೆಗಾಲದಲ್ಲಿ ಮಾಡಿಕೊಳ್ಳುವಂಥಾ ಯಾವುದೇ ಸಿದ್ದತೆ ಮಾಡಿಕೊಂಡಿರಲಿಲ್ಲ. ಹೀಗಾಗಿ, ಇವಿಎಂ ಸೇರಿದಂತೆ ಹಲವು ಎಲೆಕ್ಟ್ರಾನಿಕ್ ಉಪಕರಣಗಳ ಸಾಗಾಟಕ್ಕೆ ಸಮಸ್ಯೆ ಎದುರಾಗಲಿದೆ ಎಂದು ಅವರು ಹೇಳುತ್ತಾರೆ. ಯಂತ್ರಗಳು ಮಳೆಯಲ್ಲಿ ಒದ್ದೆಯಾದರೆ ಅಥವಾ ಶೀತಗಾಳಿ ತಗುಲಿದರೆ ತಾಂತ್ರಿಕ ಸಮಸ್ಯೆ ಎದುರಾಗಲಿದೆ. ಹೀಗಾಗಿ, ಇವಿಎಂ ಯಂತ್ರಗಳನ್ನು ಪ್ಲಾಸ್ಟಿಕ್ ಕವರ್ಗಳಿಂದ ಮುಚ್ಚಿ ರವಾನೆ ಮಾಡಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.