ಈ ಬಾರಿಯ ಆಸ್ಕರ್ ಪ್ರಶಸ್ತಿ ಸಾಕಷ್ಟು ಕುತೂಹಲ ಮೂಡಿಸಿದೆ. ಅದರಲ್ಲೂ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಗೆದ್ದೇ ಗೆಲ್ಲುತ್ತೇವೆ ಎನ್ನುವ ಧಾವಂತದಲ್ಲಿದೆ. ಈ ಪ್ರಶಸ್ತಿಯಲ್ಲಿ ಭಾಗಿಯಾಗಲು ಹಲವು ನಿಯಮಗಳಿದ್ದು ಆ ಎಲ್ಲ ನಿಯಮಗಳನ್ನು ಪೂರೈಸಿ, ಇದೀಗ ಅಂತಿಮ ಹಂತವನ್ನೂ ಅದು ತಲುಪಿದೆ.
ಮಾರ್ಚ್ 12ಕ್ಕೆ ಪ್ರಶಸ್ತಿ ಘೋಷಣೆ ಮತ್ತು ಪ್ರದಾನ ಸಮಾರಂಭವೂ ನಡೆಯಲಿದ್ದು, ಈ ವೇದಿಕೆಯ ಮೇಲೆ ಆರ್.ಆರ್.ಆರ್ ಚಿತ್ರದ ನಾಯಕರಾದ ಜ್ಯೂನಿಯರ್ ಎನ್.ಟಿ.ಆರ್ ಹಾಗೂ ರಾಮ್ ಚರಣ್ ‘ನಾಟು ನಾಟು’ ಗೀತೆಗೆ ಹೆಜ್ಜೆ ಹಾಕಲಿದ್ದಾರೆ. ಈ ಹಾಡು ಅಂತಿಮ ಸುತ್ತಿಗೆ ಆಯ್ಕೆಯೂ ಆಗಿದೆ.
ಆದರೆ ಚಿತ್ರತಂಡದ ವಿರುದ್ಧ ತೆಲುಗಿನ ಹಿರಿಯ ನಿರ್ದೇಶಕ ತಮ್ಮಾರೆಡ್ಡಿ ಕಿಡಿಕಾರಿದ್ದಾರೆ. ಆಸ್ಕರ್ ಪ್ರಶಸ್ತಿಯನ್ನು ಪಡೆಯಲೆಂದು ಆರ್.ಆರ್.ಆರ್ ಚಿತ್ರದ ನಿರ್ದೇಶಕ ರಾಜಮೌಳಿ ಬರೋಬ್ಬರಿ 80 ಕೋಟಿ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಮೊತ್ತದಲ್ಲಿ ತಾವು ಹತ್ತು ಸಿನಿಮಾಗಳನ್ನು ತಯಾರಿಸುತ್ತಿದ್ದೆ ಎಂದಿದ್ದಾರೆ.
‘ನಾನು ಆರೋಪ ಮಾಡುತ್ತಿಲ್ಲ. ನನಗೆ ಗೊತ್ತಿರುವವರೇ ಹೇಳಿರುವಂತೆ ಆಸ್ಕರ್ ಪ್ರಶಸ್ತಿಗಾಗಿ ರಾಜಮೌಳಿ ಮತ್ತು ತಂಡ ನೀರಿನಂತೆ ಹಣ ಖರ್ಚು ಮಾಡಿದ್ದಾರೆ. ಎಂಬತ್ತು ಕೋಟಿ ಖರ್ಚಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲಿ ಸಿನಿಮಾ ಬಿಡುಗಡೆ, ಪ್ರಚಾರ, ತಂಡದ ಖರ್ಚು ಮತ್ತು ಆಸ್ಕರ್ ಪ್ರಶಸ್ತಿಗಾಗಿ ಮಾಡಬೇಕಾದ ಖರ್ಚು ಹೀಗೆ ಕೋಟಿ ಕೋಟಿ ಸುರಿದಿದ್ದಾರೆ. ಇಷ್ಟು ಹಣ ಖರ್ಚು ಮಾಡಿ ಪ್ರಶಸ್ತಿ ಪಡೆಯಬೇಕಾ?’ ಎಂದು ಅವರು ತಮ್ಮಾರೆಡ್ಡಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಕನ್ನಡದ ಕೆಜಿಎಫ್ 2 ಚಿತ್ರಕ್ಕೆ ನೂರು ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಆಸ್ಕರ್ ಪ್ರಶಸ್ತಿಗಾಗಿ ಆರ್.ಆರ್.ಆರ್ ಎಂಬತ್ತು ಕೋಟಿ ಖರ್ಚು ಮಾಡಿದ್ದಾರೆ. ಇಪ್ಪತ್ತು ಕೋಟಿ ಸೇರಿಸಿದ್ದರೆ ಮತ್ತೊಂದು ಕೆಜಿಎಫ್ ಮಾದರಿಯ ಚಿತ್ರ ಮಾಡಬಹುದಿತ್ತು ಎಂದು ತಮ್ಮಾರೆಡ್ಡಿ ಲೇವಡಿ ಮಾಡಿದ್ದಾರೆ.