ಜೈಪುರ: ನಿಕೋಲಸ್ ಪೂರನ್, ಕೆ.ಎಲ್ ರಾಹುಲ್ ಅವರ ಅರ್ಧಶತಕಗಳ ಹೋರಾಟದ ಹೊರತಾಗಿಯೂ ರಾಜಸ್ಥಾನ್ ರಾಯಲ್ಸ್ ತಂಡ , ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 20 ರನ್ಗಳ ಅಮೋಘ ಜಯ ಸಾಧಿಸಿದೆ.
ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿತ್ತು. 194 ರನ್ಗಳ ಗುರಿ ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಕೊನೇ ಓವರ್ನಲ್ಲಿ ಲಕ್ನೋ ತಂಡದ ಗೆಲುವಿಗೆ 27 ರನ್ ಅಗತ್ಯವಿತ್ತು. ಬೌಲಿಂಗ್ನಲ್ಲಿದ್ದ ಅವೇಶ್ ಖಾನ್ ಮೊದಲೇ 2 ವೈಟ್ ಬಿಟ್ಟುಕೊಟ್ಟರು. ಉಳಿದ ನಾಲ್ಕು ಎಸೆತಗಳಲ್ಲಿ ಕ್ರೀಸ್ನಲ್ಲಿದ್ದ ಕೃನಾಲ್ ಪಾಂಡ್ಯ ಹಾಗೂ ನಿಕೋಲಸ್ ಪೂರನ್ ಕೇವಲ ಒಂದೊಂದು ರನ್ ಗಳಿಸುವಲ್ಲಿ ಸಮರ್ಥರಾದರು. ಇದರಿಂದ ಗೆಲುವು ರಾಜಸ್ಥಾನ್ ಪಾಲಾಯಿತು.
ಬೃಹತ್ ಮೊತ್ತದ ಚೇಸಿಂಗ್ ಆರಂಭಿಸಿದ ಲಕ್ನೋ ತಂಡ ಮೊದಲ ಮೂರು ಓವರ್ಗಳಲ್ಲೇ 11 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಕಂಗಾಲಾಗಿತ್ತು. ಇದರಿಂದ ತಂಡ ಅಲ್ಪ ಮೊತ್ತಕ್ಕೆ ಆಲೌಟ್ ಆಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದ್ರೆ ದೀಪಕ್ ಹೂಡಾ ಮತ್ತು ಕೆ.ಎಲ್ ರಾಹುಲ್ ನಡುವಿನ 49 ರನ್ಗಳ ಸಣ್ಣ ಜೊತೆಯಾಟ ತಂಡಕ್ಕೆ ಚೇತರಿಕೆ ನೀಡಿತ್ತು. ಆದ್ರೆ ಹೂಡಾ 26 ರನ್ ಗಳಿಸುತ್ತಿದ್ದಂತೆ ವಿಕೆಟ್ ಒಪ್ಪಿಸಿದರು.
ಬಳಿಕ 5ನೇ ವಿಕೆಟ್ಗೆ ಕ್ರೀಸ್ನಲ್ಲಿ ಭದ್ರವಾಗಿ ನೆಲೆಯೂರಿದ ಕೆ.ಎಲ್ ರಾಹುಲ್ ಹಾಗೂ ನಿಕೋಲಸ್ ಪೂರನ್ ಜೋಡಿ 52 ಎಸೆತಗಳಲ್ಲಿ 85 ರನ್ಗಳ ಜೊತೆಯಾಟ ನೀಡಿತ್ತು. ಇದರಿಂದ ತಂಡ ಗೆಲುವಿನ ಸನಿಹ ತಲುಪಿತ್ತು. ಕೊನೇ ಕ್ಷಣದಲ್ಲಿ ನಿಧಾನಗತಿಯ ಬ್ಯಾಟಿಂಗ್ ತಂಡದ ದಿಕ್ಕನ್ನೇ ಬದಲಿಸಿತು.
ಲಕ್ನೋ ಪರ ನಿಕೋಲಸ್ ಪೂರನ್ 64 ರನ್ (41 ಎಸೆತ, 4 ಸಿಕ್ಸರ್, 4 ಬೌಂಡರಿ), ಕೆ.ಎಲ್ ರಾಹುಲ್ 58 ರನ್ (44 ಎಸೆತ, 4 ಬೌಂಡರಿ, 2 ಸಿಕ್ಸರ್), ಕ್ವಿಂಟನ್ ಡಿ ಕಾಕ್ 4 ರನ್, ಆಯುಷ್ ಬದೋನಿ 1 ರನ್, ದೀಪಕ್ ಹೂಡಾ 26 ರನ್, ಮಾರ್ಕಸ್ ಸ್ಟೋಯ್ನಿಸ್ 3 ರನ್ ಗಳಿಸಿದ್ರೆ, ಕೃನಾಲ್ ಪಾಂಡ್ಯ 3 ರನ್ ಗಳಿಸಿ ಕ್ರೀಸ್ನಲ್ಲಿ ಉಳಿದರು. ದೇವದತ್ ಪಡಿಕಲ್ ಶೂನ್ಯ ಸುತ್ತಿದರು.
ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್ ಕೇವಲ 11 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ಬೆನ್ನಲ್ಲೇ ಸ್ಫೋಟಕ ಪ್ರದರ್ಶನಕ್ಕಿಳಿದಿದ್ದ ಯಶಸ್ವಿ ಜೈಸ್ವಾಲ್ ಸಹ 12 ಎಸೆತಗಳಲ್ಲಿ 24 ರನ್ ಬಾರಿಸಿ ಔಟಾದರು.