ಶಿಡ್ಲಘಟ್ಟ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಒಡೆದು ಇಬ್ಬಾಗವಾಗಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಒಂದು ಮಾಡುವ ಪ್ರಯತ್ನ ಸಚಿವ ಡಾ. ಎಂಸಿ ಸುಧಾಕರ್ ಮಾಡಿದರು. ಮಾಜಿ ಶಾಸಕ ವಿ. ಮುನಿಯಪ್ಪ ಕೆಪಿಸಿಸಿ ಉಪಾಧ್ಯಕ್ಷರಾಗಿ ನೇಮಕವಾಗಿರುವ ಹಿನ್ನೆಲೆಯಲ್ಲಿ ನಗರದ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ ಸನ್ಮಾನ ಸಭೆಯಲ್ಲಿ ಸಚಿವ ಸುಧಾಕರ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ರಾಜೀವ್ ಗೌಡ ಹಾಗು ಆಂಜಿನಪ್ಪ (ಪುಟ್ಟು) ಇಬ್ಬರಲ್ಲಿ ನನಗೆ ಬೇಧವಿಲ್ಲ, ಇಬ್ಬರೂ ನನ್ನ ಎರಡು ಕಣ್ಣುಗಳಿದ್ದಂತೆ, ಈ ಕ್ಷೇತ್ರಕ್ಕೆ ಅವರಿಬ್ಬರೂ ಜೋಡೆತ್ತುಗಳಿದ್ದಂತೆ ಒಟ್ಟಾಗಿ ಕೆಲಸ ಮಾಡಿದರೆ ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಬಹುಮತ ಸಾಧ್ಯವಾಗುತ್ತದೆ ಎಂದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾರ್ಯಕರ್ತರು ಇಬ್ಬಾಗವಾಗಿದ್ದರಿಂದ ಗೆಲ್ಲುವ ಕ್ಷೇತ್ರ ಕಳೆದುಕೊಳ್ಳುವಂತಾಯಿತು,
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ಬಣಗಳನ್ನು ಬಿಟ್ಟು ಕಾರ್ಯಕರ್ತರೆಲ್ಲರು ಒಂದಾಗಿ ಕೆಲಸ ಮಾಡಬೇಕು ಎಂದು ಕರೆ ಕೊಟ್ಟರು. ನಂತರ ಮಾತನಾಡಿದ ರಾಜೀವ್ ಗೌಡ, ಪಕ್ಷದ ವರಿಷ್ಠರಾದ ಡಿಕೆ ಶಿವಕುಮಾರ್ ಹಾಗು ಜಿಸಿ ಚಂದ್ರಶೇಖರ್ ರೊಂದಿಗೆ ಚರ್ಚಿಸಿದ್ದು, ಅವರ ನಿರ್ದೇಶನದಂತೆ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಆಂಜಿನಪ್ಪ (ಪುಟ್ಟು) ಜೊತೆಗೂಡಿ ಕೆಲಸ ಮಾಡುವುದಾಗಿ ತಿಳಿಸಿದರು. ಆಂಜಿನಪ್ಪ (ಪುಟ್ಟು) ಈ ಕುರಿತು ಪ್ರತಿಕ್ರಿಯಿಸಿ ಸದ್ಯಕ್ಕೆ ಲೋಕಸಭೆ ಅಭ್ಯರ್ಥಿ ಕೆ. ಗೌತಮ್ ಗೆಲುವು ಮುಖ್ಯವಾಗಿದ್ದು, ಆ ನಿಟ್ಟಿನಲ್ಲಿ ಪಕ್ಷದ ತೀರ್ಮಾನದಂತೆ ಕೆಲಸ ಮಾಡುವುದಾಗಿ ತಿಳಿಸಿದರು.
ಕ್ಷೇತ್ರದಲ್ಲಿ ಪಕ್ಷ ಕಟ್ಟಲು ಸುದೀರ್ಘ ನಲವತ್ತು ವರ್ಷಗಳ ಕಾಲ ಶ್ರಮ ವಹಿಸಿದ್ದೇನೆ, ಇಂದು ಅಧಿಕಾರಕ್ಕಾಗಿ ಪಕ್ಷ ಇಬ್ಬಾಗವಾಗುವುದು ಸರಿಯಲ್ಲ. ವಿಧಾನಸಭೆ ಚುನಾವಣೆಗೆ ಇನ್ನೂ ನಾಲ್ಕು ವರ್ಷಗಳು ಬಾಕಿ ಇದ್ದು, ಅರ್ಹತೆ ಹಾಗು ಸಾಮರ್ಥ್ಯ ಇದ್ದವರಿಗೆ ಟಿಕೆಟ್ ಸಿಗಲಿದೆ ಅಲ್ಲಿಯವರೆಗೂ ಪಕ್ಷದ ವರಿಷ್ಠರ ಸೂಚನೆಯಂತೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು.
