ಹೃದಯ ಸಂಬಂಧಿ ಸಮಸ್ಯೆಯಿಂದ ‘ಸೂಪರ್ ಸ್ಟಾರ್’ ರಜನಿಕಾಂತ್ ಇತ್ತೀಚೆಗೆ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ತಲೈವನ ಆರೋಗ್ಯ ಸುಧಾರಿಸಿದ್ದು ಮನೆಗೆ ಮರಳಿದ್ದಾರೆ. ರಜನಿಕಾಂತ್ ಆಸ್ಪತ್ರೆಗೆ ಸೇರಿದಾಗ ಅವರ ಆರೋಗ್ಯಕ್ಕಾಗಿ ಅನೇಕರು ಪ್ರಾರ್ಥಿಸಿದ್ದರು. ಅವರೆಲ್ಲರಿಗೂ ಈಗ ರಜನಿ ಧನ್ಯವಾದ ತಿಳಿಸಿದ್ದಾರೆ. ನರೇಂದ್ರ ಮೋದಿ, ಅಮಿತಾಭ್ ಬಚ್ಚನ್ ಸೇರಿದಂತೆ ಹಲವರಿಗೆ ತಲೈವ ಧನ್ಯವಾದ ತಿಳಿಸಿದ್ದಾರೆ.
ಅ.3 ರಂದು ರಾತ್ರಿ ರಜನಿಕಾಂತ್ ಅವರ ಡಿಸ್ಚಾರ್ಜ್ ಆಗಿದೆ. ಮನೆಗೆ ಮರಳಿದ ಬಳಿಕ ಸ್ವಲ್ಪ ಚೇತರಿಸಿಕೊಂಡ ಅವರು ಸೋಶಿಯಲ್ ಮೀಡಿಯಾದಲ್ಲಿ ಸರಣಿ ಪೋಸ್ಟ್ ಮಾಡಿದ್ದಾರೆ. ತಮ್ಮ ಬಗ್ಗೆ ಕಾಳಜಿ ತೋರಿಸಿ ರಾಜಕೀಯದ ಗಣ್ಯರು, ಅಭಿಮಾನಿಗಳು, ಮಾಧ್ಯಮದವರು, ಸಿನಿಮಾದ ಸೆಲೆಬ್ರಿಟಿಗಳು ಹಾಗೂ ಆಪ್ತರಿಗೆ ಧನ್ಯವಾದ ಎಂದು ತಮಿಳಿನಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಶೇಷವಾಗಿ ನರೇಂದ್ರ, ಅಮಿತಾಭ್ ಬಚ್ಚನ್, ಚಂದ್ರಬಾಬು ನಾಯ್ಡು, ತಮಿಳುನಾಡು ಗವರ್ನರ್ ರವಿ ಅವರಿಗೆ ರಜನಿಕಾಂತ್ ಧನ್ಯವಾದ ತಿಳಿಸಿದ್ದಾರೆ. ‘ನನ್ನ ಆರೋಗ್ಯದ ಬಗ್ಗೆ ಕಾಳಜಿ ತೋರಿಸಿದ್ದಕ್ಕೆ ಮತ್ತು ವೈಯಕ್ತಿಕವಾಗಿ ವಿಚಾರಿಸಿದ್ದಕ್ಕಾಗಿ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು’ ಎಂದು ರಜನಿಕಾಂತ್ ಅವರು ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
‘ಅಮಿತಾಭ್ ಬಚ್ಚನ್ ಅವರೇ.. ನೀವು ತೋರಿಸಿದ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದಗಳು’ ಎಂದು ಕೂಡ ರಜನಿಕಾಂತ್ ಅವರು ಪೋಸ್ಟ್ ಮಾಡಿದ್ದಾರೆ. ಅವರಿಗೆ ಈಗ 73 ವರ್ಷ ವಯಸ್ಸು. ಈ ಮೊದಲು ಅವರು ಅನೇಕ ಬಾರಿ ಆಸ್ಪತ್ರೆಗೆ ತೆರಳಿದ್ದರು. ವಯೋ ಸಹಜವಾಗಿ ಅವರಿಗೆ ಆಗಾಗ ಆರೋಗ್ಯ ಸಮಸ್ಯೆ ಕಾಡುತ್ತಿರುತ್ತದೆ. ಆದ್ದರಿಂದ ಅಭಿಮಾನಿಗಳಿಗೆ ಆತಂಕ ಆಗಿತ್ತು. ಈಗ ಅವರು ಡಿಸ್ಚಾರ್ಜ್ ಆಗಿ ಮನೆಗೆ ಮರಳಿರುವ ವಿಷಯ ತಿಳಿದು ಅಭಿಮಾನಿಗಳಿಗೆ ನಿರಾಳರಾಗಿದ್ದಾರೆ.