ತಮಿಳು ಚಿತ್ರದ ರಂಗದ ಸೂಪರ್ ಸ್ಟಾರ್ ರಜನಿಕಾಂತ್ ತಮಿಳು ನಾಡಿನ ಸುಪ್ರಸಿದ್ಧ ಅಣ್ಣಾಮಲೈಯಾರ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ರಜನಿಕಾಂತ್ ಭೇಟಿ ನೀಡಿರುವ ವಿಚಾರ ತಿಳಿಯುತ್ತಿದ್ದಂತೆ ಸಾಕಷ್ಟು ಮಂದಿ ದೇವಸ್ಥಾನಕ್ಕೆ ಆಗಮಿಸಿ ನೆಚ್ಚಿನ ನಟನ ಜೊತೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
ರಜನಿಕಾಂತ್ ಸದ್ಯ ಲಾಲ್ ಸಲಾಮ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಚಿತ್ರೀಕರಣ ನಡುವೆ ಬಿಡುವು ಮಾಡಿಕೊಂಡು ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಯಾವುದೇ ಭಾಗದಲ್ಲಿ ಚಿತ್ರೀಕರಣ ಆಗುತ್ತಿರಲಿ, ಆ ಭಾಗದಲ್ಲಿರುವ ಸುಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುವುದು ರಜನಿಕಾಂತ್ ಅವರ ವಾಡಿಕೆ. ಅದರಂತೆ ಲಾಲ್ ಸಲಾಮ್ ಚಿತ್ರೀಕರಣ ಸಮಯದಲ್ಲೇ ಪೂಜೆ ಸಲ್ಲಿಸಿ ಸ್ವಲ್ಪ ಹೊತ್ತು ದೇವಸ್ಥಾನದಲ್ಲೇ ಕಳೆದಿದ್ದಾರೆ.
ಟೀ ಶರ್ಟ್ ಮತ್ತು ಬಿಳಿ ಪಂಚೆಯಲ್ಲಿ ದೇವಸ್ಥಾನಕ್ಕೆ ಆಗಮಿಸಿದ್ದ ರಜನಿಯನ್ನು ನೋಡಿ ಅಭಿಮಾನಿಗಳು ಘೋಷಣೆ ಕೂಗಿ ಶುಭ ಹಾರೈಸಿದರು. ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ದೇವಸ್ಥಾನಕ್ಕೆ ಆಗಮಿಸಿದ ಸೆಲ್ಫಿಗಾಗಿ ಮುಗಿ ಬಿದ್ದ ಹಿನ್ನೆಲೆಯಲ್ಲಿ ರಜನಿಕಾಂತ್ ಅವರನ್ನು ದೇವಸ್ಥಾನದಿಂದ ಕಾರ್ ಹತ್ತಿಸಲು ಸಿಬ್ಬಂದಿ ಹರಸಾಹಸ ಪಡಬೇಕಾಯಿತು.