ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ 19 ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕಳೆದ 11 ದಿನಗಳಿಂದ ಖಾಖಿ ಪಡೆ ಸಾಕಷ್ಟು ಮಾಹಿತಿಯನ್ನು ಆರೋಪಿಗಳಿಂದ ಕಲೆ ಹಾಕಿದೆ. ದರ್ಶನ್ ಬಂಧನ ಸಾಕಷ್ಟು ಅಭಿಮಾನಿಗಳ ನಿದ್ದೆ ಕೆಡಿಸಿದೆ. ಘಟನೆಯ ಕುರಿತು ಸಾಕಷ್ಟು ಮಂದಿ ಪ್ರತಿಕ್ರಿಯಿಸಿದ್ದು ದರ್ಶನ್ ಎಂಡ್ ಗ್ಯಾಂಗ್ ಕೃತ್ಯವನ್ನು ಖಂಡಿಸಿದ್ದಾರೆ. ಇದೀಗ ನಟ ಹಾಗೂ ಬಿಗ್ ಬಾಸ್ ಸ್ಪರ್ಧಿ ರಕ್ಷಕ್ ಬುಲೆಟ್ ಪರೋಕ್ಷವಾಗಿ ಪೋಸ್ಟ್ ಒಂದನ್ನು ಮಾಡಿದ್ದಾರೆ.
‘ಹತ್ತಿರವಾದವರು ಕಷ್ಟ ಅನುಭವಿಸುತ್ತಿರುವಾಗ ನಾವು ಸಂಭ್ರಮಾಚರಣೆ ಮಾಡುವುದು ಸರಿಯಲ್ಲ’ ಎಂದಿರುವ ರಕ್ಷಕ್ ಅವರ ಬರ್ತ್ಡೇ ಸೆಲೆಬ್ರೇಷನ್ಗೆ ಬ್ರೇಕ್ ಹಾಕಿದ್ದಾರೆ. ಜೂನ್ 21 ಅವರ ಜನ್ಮದಿನ. ಅಂದು ಅವರ ಸಿನಿಮಾ ಘೋಷಣೆ ಆಗೋ ಸಾಧ್ಯತೆ ಇದೆ. ಆದರೆ ದರ್ಶನ್ ಬಂಧನದ ಕಾರಣಕ್ಕೆ ರಕ್ಷಕ್ ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡದಿರಲು ನಿರ್ಧರಿಸಿದ್ದಾರೆ.
‘ಎಲ್ಲರಿಗೂ ನಮಸ್ಕಾರ ಹಾಗೂ ಫಾದರ್ಸ್ ಡೇ ಶುಭಾಶಯಗಳು. ಇವತ್ತು ಬೆಳಗ್ಗೆಯಿಂದ ನನ್ನ ತಂದೆಯ ನೆನಪು ನನ್ನನ್ನು ತುಂಬಾ ಕಾಡುತ್ತಿದೆ. ಎಲ್ಲರಂತೆ ನನಗೂ ಕೂಡ ನನ್ನ ತಂದೆಯೇ ಮೊದಲ ಹೀರೋ. ಹೀರೋ ಅಷ್ಟೇ ಅಲ್ಲ ಒಳ್ಳೆಯ ಮಾರ್ಗದರ್ಶಕರು ಹಾಗೂ ಸ್ನೇಹಿತರು ಕೂಡ ಆಗಿದ್ದರು. ಇತ್ತೀಚಿನ ದಿನಗಳಲ್ಲಿ ನಡೆದ ಕೆಲವೊಂದು ಘಟನೆಗಳು ಮನಸ್ಸಿಗೆ ನೋವು ತಂದಿದೆ. ನಮ್ಮ ಮನಸ್ಸಿಗೆ ಹತ್ತಿರವಾದವರು ಕಷ್ಟ ಅನುಭವಿಸುತ್ತಿರುವಾಗ ನಾವು ಸಂಭ್ರಮಾಚರಣೆ ಮಾಡುವುದು ಸರಿಯಲ್ಲ ಎನ್ನುವುದು ನನ್ನ ಭಾವನೆ’ ಎಂದು ಪೋಸ್ಟ್ ಆರಂಭಿಸಿದ್ದಾರೆ ರಕ್ಷಕ್.
‘ನಾನು ಈ ವರ್ಷ ಹುಟ್ಟುಹಬ್ಬ ಆಚರಣೆ ಮಾಡುವುದು ಬೇಡ ಎನ್ನುವ ತೀರ್ಮಾನಕ್ಕೆ ಬಂದಿದ್ದೇನೆ. ಮುಂದಿನ ವರ್ಷದ ಹುಟ್ಟು ಹಬ್ಬದಷ್ಟರಲ್ಲಿ ಏನಾದರೂ ಒಂದು ಸಾಧನೆ ಮಾಡಿರುತ್ತೇನೆ, ಆಗ ನನ್ನ ಎಲ್ಲ ಸ್ನೇಹಿತರು, ಹಿತೈಷಿಗಳು, ಗುರು-ಹಿರಿಯರು ಹಾಗೂ ಪ್ರೀತಿ ಪಾತ್ರರೊಂದಿಗೆ ಆಚರಣೆ ಮಾಡುತ್ತೇನೆ. ಹೀಗೆ ನಿಮ್ಮ ಪ್ರೀತಿ ವಿಶ್ವಾಸ ಹಾಗೂ ಆಶೀರ್ವಾದ ನನ್ನ ಮೇಲಿರಲಿ ನನ್ನನ್ನು ಬೆಂಬಲಿಸುತ್ತಿರುವ ಎಲ್ಲ ನನ್ನ ಸ್ನೇಹಿತರು, ಪ್ರೀತಿ ಪಾತ್ರರು, ಮಾಧ್ಯಮ ಮಿತ್ರರು, ಟ್ರೋಲ್ ಪೇಜ್ಗಳು, ಯೂಟ್ಯೂಬ್ರ್ಸ್ ಹಾಗೂ ಎಲ್ಲಾ ಸಾಮಾಜಿಕ ಜಾಲತಾಣದ ಸ್ನೇಹಿತರಿಗೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.
ಬುಲೆಟ್ ಪ್ರಕಾಶ್ ಹಾಗೂ ದರ್ಶನ್ ಮಧ್ಯೆ ಒಳ್ಳೆಯ ಗೆಳೆತನ ಇತ್ತು. ಈ ಕಾರಣಕ್ಕೆ ಬುಲೆಟ್ ಪ್ರಕಾಶ್ ಮಗ ಎನ್ನುವ ಕಾರಣಕ್ಕೆ ದರ್ಶನ್ ಹಾಗೂ ರಕ್ಷಕ್ ಮಧ್ಯೆ ಒಳ್ಳೆಯ ಗೆಳೆತನ ಬೆಳೆದಿದೆ. ದರ್ಶನ್ ಡಿ ಬಾಸ್ ಆದರೆ, ನಾನು ಆರ್ ಬಾಸ್ ಎಂದು ಅವರು ಕರೆದುಕೊಂಡಿದ್ದಾರೆ. ಬಿಗ್ ಬಾಸ್ಗೆ ಹೋದ ತಿಂಗಳ ಒಳಗೆ ಅವರು ಎಲಿಮಿನೇಟ್ ಆದರು. ಜೊತೆಗೆ ಸಾಕಷ್ಟು ಟ್ರೋಲ್ ಗಳ ಮೂಲಕವೂ ರಕ್ಷಕ್ ಸುದ್ದಿಯಾಗಿದ್ದರು.