ಶ್ರೀನಗರ: ಭಗವಂತ ಶ್ರೀರಾಮ ಕೇವಲ ಹಿಂದೂಗಳಿಗಷ್ಟೇ ದೇವರಲ್ಲ. ಧರ್ಮದ ಹೊರತಾಗಿ ಆತನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬರಿಗೂ ದೇವರು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಉದಯಪುರದಲ್ಲಿ ರ್ಯಾಲಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಪಕ್ಷ ಅಧಿಕಾರದಲ್ಲಿ ಉಳಿಯಲು ರಾಮನ ಹೆಸರನ್ನು ಮಾತ್ರ ಬಳಸುತ್ತಿದೆ. ಆದರೆ ರಾಮ ಕೇವಲ ಹಿಂದೂಗಳ ದೇವರಲ್ಲ ಆತನ ಮೇಲೆ ನಂಬಿಕೆ ಇಡುವ ಎಲ್ಲರಿಗೂ ದೇವರು ಎಂದು ಕಿಡಿಕಾರಿದ್ದಾರೆ.
ರಾಮ ಕೇವಲ ಹಿಂದೂಗಳ ದೇವರು ಎಂಬ ಕಲ್ಪನೆಯನ್ನು ಮನಸ್ಸಿನಿಂದ ತೆಗೆದು ಹಾಕಿ. ಮುಸ್ಲಿಂ, ಕಿಶ್ಚಿಯನ್, ಅಮೆರಿಕನ್ ಅಥವಾ ರಷ್ಯನ್ ಯಾರೇ ಆಗಿರಲಿ ಆತನ ಮೇಲೆ ನಂಬಿಕೆ ಇಡುವ ಪ್ರತಿಯೊಬ್ಬರಿಗೂ ಆತ ದೇವರಾಗುತ್ತಾನೆ ಎಂದರು.
ನಾವು ರಾಮನ ಭಕ್ತರು ಎಂದು ನಿಮ್ಮ ಬಳಿಗೆ ಬರುವವರು ಮೂರ್ಖರು. ಅವರು ರಾಮನ ಹೆಸರಿನಲ್ಲಿ ಲಾಭ ಪಡೆದುಕೊಳ್ಳಲು ಬಯಸುತ್ತಾರೆ. ಅವರಿಗೆ ರಾಮನ ಮೇಲೆ ಪ್ರೀತಿ ಇರುವುದಿಲ್ಲ. ಬದಲಿಗೆ ಅಧಿಕಾರದ ಮೇಲೆ ಇರುತ್ತದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ಘೋಷಣೆಯಾದಾಗ ಅವರು ಸಾಮಾನ್ಯ ಜನರ ಗಮನ ಬೇರೆಡೆಗೆ ತಿರುಗಿಸಲು ರಾಮ ಮಂದಿರವನ್ನು ಉದ್ಘಾಟಿಸುತ್ತಿದ್ದಾರೆ ಎಂಬುದು ತಿಳಿದುಬರುತ್ತದೆ. ಆದ್ದರಿಂದ ದಯವಿಟ್ಟು ಜನರ ನಡುವೆ ಹೋಗಿ ದ್ವೇಷದ ಪ್ರಚಾರವನ್ನು ನಿಲ್ಲಿಸಲು ಮನವಿ ಮಾಡುತ್ತೇವೆ ಎಂದರು.