ಇಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ. ಅದರೆ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ಮೆಕ್ಸಿಕೋದಲ್ಲೂ ನೂತನವಾಗಿ ನಿರ್ಮಿಸಲಾದ ರಾಮ ಮಂದಿರದ ಉದ್ಘಾಟನೆ ಮಾಡಲಾಗಿದೆ.
ಮೆಕ್ಸಿಕೋದ ಕ್ವೆರೆಟಾರೊ ನಗರದಲ್ಲಿ ನಿನ್ನೆ ರಾಮ ಮಂದಿರದ ಉದ್ಘಾಟನೆ ನಡೆದಿದೆ. ಭಾರತೀಯ ಅರ್ಚಕರೊಬ್ಬರು ರಾಮನ ಮೂರ್ತಿಗೆ ಮೊದಲಿಗೆ ಪೂಜೆ ಸಲ್ಲಿಸಿದ್ದು, ಬಳಿಕ ಭಕ್ತರಿಗೆ ದೇವರ ದರ್ಶನ ಮಾಡುವ ಅವಕಾಶ ನೀಡಲಾಗಿದೆ.
ಮೆಕ್ಸಿಕೋದ ರಾಯಭಾರಿ ಕಚೇರಿ ಈ ಸುದ್ದಿಯನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ‘ಮೆಕ್ಸಿಕೋದಲ್ಲಿ ಭಗವಾನ್ ರಾಮನ ಮೊದಲ ದೇವಾಲಯವನ್ನು ನಿರ್ಮಿಸಲಾಗಿದೆ. ಅಯೋಧ್ಯೆಯಲ್ಲಿ ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ಒಂದು ದಿನ ಮೊದಲು, ಮೆಕ್ಸಿಕೋದ ಕ್ವೆರೆಟಾರೊ ನಗರದಲ್ಲಿ ಶ್ರೀರಾಮ ದೇವಾಲಯವನ್ನು ಉದ್ಘಾಟಿಸಲಾಯಿತು.” ಎಂದು ಬರೆದುಕೊಂಡಿದೆ.
ಹೊಸದಾಗಿ ನಿರ್ಮಿಸಲಾದ ಈ ದೇವಾಲಯಕ್ಕೆ ಭಾರತದಿಂದ ವಿಗ್ರಹವನ್ನು ತರಲಾಗಿದೆ. ಭಾರತೀಯರು ಭಜನೆ, ಆರತಿ ಮಾಡುವ ಮೂಲಕ ರಾಮನಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿದ್ದಾರೆ.