ಶಿಡ್ಲಘಟ್ಟ; ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲ ಉಂಟಾಗಿದ್ದು, ಹೊಸಬರಿಗೆ ಟಿಕೆಟ್ ನೀಡುವ ಮೂಲಕ ಸ್ಥಳೀಯರಿಗೆ ಅವಕಾಶ ತಪ್ಪಿಸಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ನಗರ ಮೋರ್ಚಾ ಅಧ್ಯಕ್ಷ ರಾಘವೇಂದ್ರ ತನ್ನ ಬೆಂಬಲಿಗರೊಂದಿಗೆ ಪಕ್ಷದಿಂದ ಹೊರ ಬಂದು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ. ಅಭ್ಯರ್ಥಿ ಆಯ್ಕೆಯ ವಿಚಾರವಾಗಿ ಪಕ್ಷದಲ್ಲಿ ಆಂತರಿಕ ಚರ್ಚೆ ನಡೆದಿದ್ದು, ಕಾರ್ಯಕರ್ತರು ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ಹೊರ ಹಾಕುತ್ತಿದ್ದಾರೆ. ಕಾರ್ಯಕರ್ತರ ಕಲಹಗಳಿಗೆ ಕ್ಷೇತ್ರದ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಉದ್ಯಮಿ ರಾಮಚಂದ್ರಗೌಡ ಕಾರಣ ಎನ್ನಲಾಗುತ್ತಿದ್ದು, ತನ್ನ ವಿದೇಯರನ್ನಷ್ಟೇ ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ, ಪಕ್ಷ ಕಟ್ಟಿದ ಹಳಬರನ್ನು ದೂರ ತಳ್ಳಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಂಡು ಸೀದಾ ಕ್ಷೇತ್ರಕ್ಕೆ ಕಾಲಿಟ್ಟಿದ್ದ ರಾಮಚಂದ್ರಗೌಡ ಕಾರ್ಪೊರೇಟ್ ಮಾದರಿಯಲ್ಲಿ ರಾಜಕಾರಣ ಹಾಗು ಅಭಿವೃದ್ದಿ ಮಾಡುವ ಮಾತುಗಳನ್ನಾಡಿದ್ದರು. ಬಡವರಿಗಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಿಸುವುದಾಗಿ ಹೇಳಿದ್ದ ಸ್ಥಳದಲ್ಲಿ ಬಿಜೆಪಿ ಕಚೇರಿ ನಿರ್ಮಿಸಿ ಜನರ ವಿಶ್ವಾಸಕ್ಕೆ ಪೆಟ್ಟು ಕೊಟ್ಟಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ಕ್ಷೇತ್ರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ನಡೆಸುವ ಮೂಲಕ ದೇವರು ಹಾಗು ಸೇವೆಯ ನೆಪದಲ್ಲಿ ಚುನಾವಣೆ ಎದುರಿಸಲು ಮುಂದಾಗಿದ್ದಾರೆ. ಕಾರ್ಯಕ್ರಮಕ್ಕೆ ಬರುವ ಭಕ್ತರಿಗೆ ತಿರುಪತಿ ಲಾಡು ಪ್ರಸಾದ ವಿತರಿಸುವುದಾಗಿ ಹೇಳಿ ಬೇರೆಯದೇ ಲಾಡು ಕೊಟ್ಟು ಭಕ್ತರ ಟೀಕೆಗೆ ಗುರಿಯಾಗಿದ್ದರು. ಕಲ್ಯಾಣೋತ್ಸವ ಮುಗಿದರೂ ಅದೇ ನೆಪದಲ್ಲಿ ಕ್ಷೇತ್ರದ ಎಲ್ಲಾ ಮಹಿಳಾ ಮತದಾರರಿಗೆ ಸೀರೆ ಹಂಚಲು ಹೋಗಿ ಸಿಕ್ಕಿಬಿದ್ದಿದ್ದರು. ರೇಷ್ಮೆ ಬೆಳೆಗಾರರು ಮತ್ತು ರೀಲರ್ಸ್ ಗಳ ಬಹು ವರ್ಷಗಳ ಬೇಡಿಕೆಗೆ ಸ್ಪಂದಿಸಿ ರಾಜ್ಯ ಸರ್ಕಾರ ಸುಸಜ್ಜಿತ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ರಾಜ್ಯ ಬಜೆಟ್ ನಲ್ಲಿ 75 ಕೋಟಿ ಹಣ ಬಿಡುಗಡೆಮಾಡಿದ್ದು, ರಾಮಚಂದ್ರಗೌಡ ತನ್ನ ಪ್ರಭಾವದಿಂದಲೇ ಹಣ ಬಿಡುಗಡೆಯಾದಂತೆ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುವ ಮೂಲಕ ಮಾಜಿ ಶಾಸಕರುಗಳು ಹಾಗು ರೈತ ಹೋರಾಟಗಾರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕೇವಲ ಒಂದು ತಿಂಗಳ ಹಿಂದೆ ಪಕ್ಷಕ್ಕೆ ಸೇರ್ಪಡೆಗೊಂಡು ರಾಜಕೀಯ ಪ್ರವೇಶ ಮಾಡಿ ತಮ್ಮ ಅಪ್ರಭುದ್ದ ನಿರ್ಧಾರ ಗಳಿಂದ ಪಕ್ಷದ ಹಿರಿಯರ ನಾಯಕರ ಅಸಮಾಧಾನಕ್ಕೆ ಕಾರಣರಾಗಿದ್ದಾರೆ.
ಟಿಕೆಟ್ ನಿರೀಕ್ಷೆಯಲ್ಲಿ ಮಾಜಿ ಶಾಸಕ ರಾಜಣ್ಣ….
ಕಳೆದ ವಿಧಾನಸಭೆ ಚುನಾವಣೆಯ ಕೊನೇ ಕ್ಷಣದಲ್ಲಿ ಜೆಡಿಎಸ್ ನಿಂದ ಟಿಕೆಟ್ ವಂಚಿತರಾಗಿ ಪರಾಭವಗೊಂಡಿದ್ದ ಮಾಜಿ ಶಾಸಕ ಎಂ ರಾಜಣ್ಣ ನಂತರದಲ್ಲಿ ಸಚಿವ ಸುಧಾಕರ್ ಸಖ್ಯದಿಂದ ಬಿಜೆಪಿ ಸೇರಿದರು, ಅಲ್ಲಿಂದ ಪಕ್ಷದ ನಿಷ್ಟಾವಂತರಂತಿದ್ದು, ಕ್ಷೇತ್ರದ ಮತದಾರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಈ ಬಾರಿ ಬಿಜೆಪಿಯಿಂದ ಸ್ಪರ್ದಿಸಿ ಗೆಲ್ಲುವ ಇಂಗಿತ ವ್ಯಕ್ತ ಪಡಿಸಿದ್ದರು. ಸದ್ಯ ಹೊಸ ಅಭ್ಯರ್ಥಿ ಆಗಮನದಿಂದ ರಾಜಣ್ಣನ ಬೆಂಬಲಿಗರಲ್ಲಿ ಬೇಸರ ಉಂಟಾಗಿದ್ದು, ಅಸಮಾಧಾನವನ್ನು ನುಂಗಿದ್ದಾರೆ. ರಾಜಣ್ಣ ಪಕ್ಷ ಸೂಚಿಸಿದವರು ಅಭ್ಯರ್ಥಿಯಾಗಲಿದ್ದು, ಯಾರೇ ಅಭ್ಯರ್ಥಿಯಾದರೂ ಪಕ್ಷದ ಗೆಲುವಿಗಾಗಿ ಕೆಲಸ ಮಾಡುತ್ತೇನೆ ಎನ್ನುವ ಮೂಲಕ ರಾಮಚಂದ್ರ ಗೌಡರ ಹಾದಿ ಸುಗಮವಾಗಿಸಿದ್ದಾರೆ.
ಗೆಲುವಿನ ಸವಾಲುಗಳು…
ಕೇತ್ರದಲ್ಲಿ ಹೊಸ ಅಭ್ಯರ್ಥಿಯನ್ನು ಗೆಲ್ಲಿಸಿರುವ ಇತಿಹಾಸ ಇಲ್ಲ. ಸುಮಾರು 40 ವರ್ಷಗಳಿಂದ ಇಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನ ನಡುವೆ ತೀವ್ರ ಸ್ಪರ್ಧೆ ನಡೆದಿದ್ದು, ಬಿಜೆಪಿ ಮತಗಳು ಮೂರಂಕಿ ದಾಟಿಲ್ಲ. ಬಿಜೆಪಿಯ ಕಾರ್ಯಕ್ರಮಗಳು ನಗರಕ್ಕೆ ಸೀಮಿತವಾಗಿದ್ದು ಚುನಾವಣೆಯ ಸಂದರ್ಭದಲ್ಲಷ್ಟೇ ಹಳ್ಳಿಗಳ ಕಡೆ ಮುಖ ಮಾಡುತ್ತಾರೆ ಎಂಬ ಆರೋಪಗಳಿವೆ. ಸಮರ್ಥ ಸ್ಥಳೀಯ ನಾಯಕರ ಕೊರತೆ ಹಾಗು ಪ್ರತಿ ಚುನಾವಣೆಗೂ ಅಭ್ಯರ್ಥಿ ಬದಲಾವಣೆ ಮಾಡುವುದರಿಂದ ಕಾರ್ಯಕರ್ತರ ಕಷ್ಟಗಳಿಗೆ ಜೊತೆ ನಿಲ್ಲುವ ನಾಯಕ ಇಲ್ಲದಂತಾಗಿದೆ. ಕ್ಷೇತ್ರದ ಬಿಜೆಪಿ ನಾಯಕರ ಸಿದ್ದ ಸೂತ್ರ ಭಾಷಣಗಳು ಮತ್ತು ಮತದಾರರಿಗೆ ಭರವಸೆ ನೀಡಿ ಚುನಾವಣೆ ನಂತರದಲ್ಲಿ ಜೊತೆ ನಿಲ್ಲದಿರುವುದು ಮತದಾರರ ಅವಿಶ್ವಾಸಕ್ಕೆ ಕಾರಣವಾಗಿದೆ.
ಈ ಬಾರಿ ಸ್ಥಳೀಯ ನಾಯಕರಿಗೆ ಟಿಕೆಟ್ ಸಿಗಬಹುದು ಎಂದು ನಿರೀಕ್ಷಿಸಿದ್ದೆವು ಆದರೆ ಉದ್ಯಮಿ ರಾಮಚಂದ್ರಗೌಡರಿಗೆ ಟಿಕೆಟ್ ಬಹುತೇಕ ಖಚಿತವಾಗಿದ್ದು, ಪಕ್ಷ ಸಂಘಟನೆಗೆ ಹಿನ್ನೆಡೆಯಾಗಿದೆ. ಬ್ರಿಟೀಷರು ಭಾರತಕ್ಕೆ ವ್ಯಾಪಾರಕ್ಕೆ ಬಂದಂತೆ ಉದ್ಯಮಿಗಳು ರಾಜಕಾರಣಕ್ಕೆ ಬರುತ್ತಿದ್ದಾರೆ. ಕ್ಷೇತ್ರದಲ್ಲಿ ಮತದಾನದ ಹಕ್ಕು ಹೊಂದಿಲ್ಲದ ಅಭ್ಯರ್ಥಿ ಗೆ ಜನ ಹೇಗೆ ಮತ ಕೊಡುತ್ತಾರೆ? ಚುನಾವಣೆ ಮುಗಿದ ನಂತರ ಅಭ್ಯರ್ಥಿ ಕ್ಷೇತ್ರದಿಂದ ನಾಪತ್ತೆ ಆದರೆ ಮತದಾರರಿಗೆ ನಾವು ಉತ್ತರ ಕೊಡಬೇಕಾಗುತ್ತದೆ ಎನ್ನುವ ಮೂಲಕ ನಗರಸಭೆ ಸದಸ್ಯ ರಾಘವೇಂದ್ರ ಉದ್ಯಮಿಯ ರಾಜಕಾರಣವನ್ನು ಬಹಿರಂಗ ಟೀಕಿಸಿ ಹೊರಬಂದಿದ್ದಾರೆ.
ನಾಗೇಂದ್ರ ಪ್ರಸಾದ್,