ಬೆಳಗಾವಿ: ‘ಬಳು ಹೊಕ್ಕ ಮನೆ ಅಳು ಆಗುತ್ತಾ? ಯಾವತ್ತೂ ಅಂತಹ ಮನೆಯಲ್ಲಿ ಇರಬಾರದು. ಇದೇ ಕಾರಣದಿಂದ ಬಿಜೆಪಿ ಬಿಟ್ಟು ಬಂದಿದ್ದೇನೆ’ ಎಂದು ಬಿಜೆಪಿಯಿಂದ ಕಾಂಗ್ರೆಸ್ಗೆ ಸೇರ್ಪಡೆಗೊಂಡು ಜಿಲ್ಲೆ ಪ್ರವೇಶಿಸಿದ ಲಕ್ಷ್ಮಣ ಸವದಿ ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ವಿರುದ್ಧ ಆಕ್ರೋಶ್ ವ್ಯಕ್ತಪಡಿಸಿದರು.
ಶನಿವಾರ ಬೆಂಗಳೂರಿನಿಂದ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಂತರ ‘ಪೀಡೆ ತೊಲಗಿತು’ ಎನ್ನುವ ರಮೇಶ್ ಜಾರಕಿಹೋಳಿ ಮಾತಿನ ವಿಷಯವಾಗಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ‘ಬಳು ಎನ್ನುವ ಹಕ್ಕಿ ಹೊಕ್ಕ ಮನೆ ತಕ್ಷಣ ಬಿಡಬೇಕು’ ಎನ್ನುವ ಸಂಪ್ರದಾಯ ನಮ್ಮಲ್ಲಿದೆ. ಅದೇ ರೀತಿ ರಮೇಶ್ ಜಾರಕಿಹೊಳಿ ಸೇರಿಕೊಂಡಿರುವ ಬಿಜೆಪಿಯಲ್ಲಿ ನಾನಿರಬಾರದು ಎನ್ನುವ ನಿರ್ಧಾರಕ್ಕೆ ಬಂದು ಕಾಂಗ್ರೆಸ್ ಪಕ್ಷ ಸೇರಿದ್ದಾಗಿದೆ ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ವಿರುದ್ಧ ಕುಟುಕಿದರು.
ಎರಡೂ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಅಥಣಿ ವಿಧಾನಸಭಾ ಮತಕ್ಷೇತ್ರದ ಚುನಾವಣೆಗೆವ ನಾಮಪತ್ರ ಸಲ್ಲಿಸುತ್ತೇನೆ ಎಂದ ಲಕ್ಷ್ಮಣ ಸವದಿ, ‘ಬಿಜೆಪಿಯಲ್ಲಿ ಈಗ ಸಿದ್ಧಾಂತಗಳು ಉಳಿದಿಲ್ಲ. ನನಗೆ ಬಿಜೆಪಿ ಬಿಟ್ಟು ಕಾಂಗ್ರೆಸ್ಗೆ ಹೋಗುವ ವಾತಾವರಣವನ್ನು ಬಿಜೆಪಿ ನಾಯಕರೇ ಸೃಷ್ಟಿ ಮಾಡಿದರು. ಆಪರೇಷನ್ ಕಮಲ ಸಂದರ್ಭದಲ್ಲಿ 2023ರ ಚುನಾವಣೆಯಲ್ಲಿ ಟಿಕೆಟ್ ಭರವಸೆ ಕೊಟ್ಟು ಡಿಸಿಎಂ ಕೂಡ ಮಾಡಿದರಾದರೂ ಹೇಳದೆ ಕೇಳದೆ ಡಿಸಿಎಂ ಸ್ಥಾನ ಕಿತ್ತುಕೊಂಡರು. ಈಗ ಟಿಕೆಟ್ ಕೊಡದೇ ವಂಚಿಸಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಎಸ್ವೈಗೂ ನೈತಿಕತೆ ಇಲ್ಲ: ಭ್ರಷ್ಟಾಚಾರ, ಪಕ್ಷ ವಿರೋಧಿ ಚಟುವಟಿಕೆ, ಪಕ್ಷಕ್ಕೆ ಮುಜುಗರ ತರುವ ಕೆಲಸ ಯಾವೂದೂ ಮಾಡದ ನನ್ನನ್ನು, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ ಅವರನ್ನೂ ಬಿಜೆಪಿ ನಿರ್ಲಕ್ಷಿಸಿದೆ. ಆಪರೇಷನ್ ಕಮಲದಿಂದ ಸರಕಾರ ರಚನೆಗೆ ಕಾರಣರಾದ 13 ಜನರಿಗೆ ಟಿಕೆಟ್ ಕೊಡುವ ಮಾತು ಕೊಟ್ಟಿದ್ದೇವೆ ಎನ್ನುವವರೇ ನನಗೂ ಮಾತು ಕೊಟ್ಟಿದ್ದರು ಎಂದರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿ ಪಕ್ಷಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರು. ಅವರಿಗೂ ಟಿಕೆಟ್ ನೀಡಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಈಗ ಬಿಜೆಪಿಯಲ್ಲಿ ತತ್ವ ಸಿದ್ಧಾಂತ ಉಳಿದಿಲ್ಲ. ಎಲ್ಲವೂ ಕೂಡ ಗಾಳಿಗೆ ತೂರುವ ಕೆಲಸ ನಡೆದಿದೆ. ನನಗೆ ಸಾಕಷ್ಟು ಅವಮಾನವಾಗಿದೆ. ಅದನ್ನು ಬಹಿರಂಗಪಡಿಸಲು ಬರುವುದಿಲ್ಲ ಎಂದ ಲಕ್ಷ್ಮಣ ಸವದಿ, ತಂದೆಗೆ ಸಮಾನರಾದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರೂ ನೈತಿಕತೆ ಕಳೆದುಕೊಂಡಿದ್ದಾರೆ. ಈ ಹಿಂದೆ ಅವರೂ ಪಕ್ಷ ಬಿಟ್ಟು ಹೋಗಿ ಮರಳಿ ಬಂದವರು. ಈಗ ನಮಗೆ ಬುದ್ದಿ ಹೇಳುವ ನೈತಿಕತೆ ಅವರಲ್ಲಿಲ್ಲ ಎಂದು ಹರಿಹಾಯ್ದರು.