ಸಿನಿಮಾ, ಪತ್ರಿಕೋದ್ಯಮ ಹಾಗೂ ಉದ್ಯಮ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ ರಾಮೋಜಿ ರಾವ್ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಇದೀಗ ರಾಮೋಜಿ ರಾವ್ ಅವರ ಹಳೆಯ ವಿಡಿಯೋ ವೈರಲ್ ಆಗಿದ್ದು, ಆ ವಿಡಿಯೋದಿಂದ ಜಗನ್ ಸರ್ಕಾರದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಮೋಜಿ ರಾವ್ ನಿತ್ರಾಣರಾಗಿ ಹಾಸಿಗೆ ಮೇಲೆ ಮಲಗಿದ್ದರೂ ಬಿಡದೆ ಅಮಾನವೀಯವಾಗಿ ತನಿಖಾಧಿಕಾರಿಗಳು ವಿಚಾರಣೆ ನಡೆಸಿರುವ ವಿಡಿಯೋ ಅದಾಗಿದೆ.ರಾಮೋಜಿ ರಾವ್ ಹಾಗೂ ಜಗನ್ ಸರ್ಕಾರಕ್ಕೆ ಮೊದಲಿನಿಂದಲೂ ಸಮಸ್ಯೆ ಇದೆ. 2023 ರಲ್ಲಿ ಹೊರಬಂದ ಮಾರ್ಗದರ್ಶಿ ಚಿಟ್ ಫಂಡ್ ಪ್ರಕರಣದಲ್ಲಿ ಆಂಧ್ರ ಸರ್ಕಾರವು ರಾಮೋಜಿ ರಾವ್ ಅವರಿಗೆ ಸೇರಿದ ಕೆಲವು ಆಸ್ತಿಗಳನ್ನು ಜಪ್ತಿ ಮಾಡಿಕೊಂಡಿತ್ತು. ಮಾತ್ರವಲ್ಲದೆ ಆ ವೇಳೆಗಾಗಲೆ ಹಾಸಿಗೆ ಹಿಡಿದಿದ್ದ ರಾಮೋಜಿ ರಾವ್ ಅವರನ್ನು ವಿಚಾರಣೆ ಹೆಸರಲ್ಲಿ ಸಾಕಷ್ಟು ಹಿಂಸೆಯನ್ನೂ ನೀಡಿತು ಎನ್ನಲಾಗಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸದ್ಯ ಹರಿದಾಡುತ್ತಿರುವ ವಿಡಿಯೋ ಒಂದು ವರ್ಷ ಹಳೆಯದಾಗಿದ್ದು, ಬೆಡ್ಮೇಲೆ ಮಲಗಿರುವ ರಾಮೋಜಿ ರಾವ್ ಅವರನ್ನು ಕೆಲವು ಅಧಿಕಾರಿಗಳು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ರಾಮೋಜಿ ರಾವ್ ಅವರು, ನನಗೆ ಹೃದಯ ಸಮಸ್ಯೆ ಇದೆ, ಎದೆ ನೋವುತ್ತಿದೆ, ನನಗೆ ಉಸಿರಾಡಲು ಸಹ ಸಮಸ್ಯೆ ಆಗುತ್ತಿದೆ ಎಂದು ಕಷ್ಟಪಟ್ಟು ಹೇಳುತ್ತಿದ್ದರೂ ಸಹ ಅಧಿಕಾರಿಗಳು ಬಿಡದೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಸುಮಾರು 8-10 ಅಧಿಕಾರಿಗಳು ರಾಮೋಜಿ ರಾವ್ ಅವರ ಬೆಡ್ ಪಕ್ಕದಲ್ಲಿಯೇ ಕುರ್ಚಿಗಳನ್ನು ಹಾಕಿಕೊಂಡು ಕೂತು ಚಿಕಿತ್ಸೆಗೂ ಅವಕಾಶ ಕೊಡದೆ ಪ್ರಶ್ನೆಗಳನ್ನು ಕೇಳುತ್ತಿರುವ ದೃಶ್ಯಗಳು ವಿಡಿಯೋದಲ್ಲಿವೆ. ಅಲ್ಲದೆ, ರಾಮೋಜಿ ರಾವ್ ಅವರ ಕುಟುಂಬದೊಟ್ಟಿಗೆ ಸಹ ಅಧಿಕಾರಿಗಳು ಕಠಿಣವಾಗಿ ವರ್ತಿಸಿರುವ, ಮಾತನಾಡಿರುವ ದೃಶ್ಯಗಳು ವಿಡಿಯೋನಲ್ಲಿದೆ.