ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಇತ್ತೀಚೆಗಷ್ಟೇ ನಟಿ ರಮ್ಯಾ ಅವರನ್ನು ಭೇಟಿಯಾಗಿದ್ದಾರೆ. ರಮ್ಯಾ ಜೊತೆ ತೆಗೆಸಿಕೊಂಡ ಫೋಟೋವನ್ನೂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಪ್ರತಾಪ್ ಸಿಂಹ, ‘ರಮ್ಯಾ ನನ್ನ ನೆಚ್ಚಿನ ನಟಿ’ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಟ್ವೀಟ್ ಭಾರಿ ಚರ್ಚೆ ಹುಟ್ಟು ಹಾಕಿದ್ದು, ಅದಕ್ಕೆ ರಾಜಕೀಯ ಬಣ್ಣ ಬೆರೆಸಲಾಗಿದೆ.
ರಮ್ಯಾ ನಟನೆಯ ಜೊತೆಗೆ ಕಾಂಗ್ರೆಸ್ ಪಕ್ಷದ ಮುಖ್ಯ ಹುದ್ದೆಯಲ್ಲಿದ್ದವರು. ಮಾಜಿ ಸಂಸದೆ ಕೂಡ ಹೌದು. ಪ್ರತಾಪ್ ಸಿಂಹ ಬಿಜೆಪಿ ಪಕ್ಷದಿಂದ ಸಂಸದರಾದವರು. ಅಲ್ಲದೇ, ಹತ್ತಿರದಲ್ಲೇ ಚುನಾವಣೆಯಿದೆ. ಈ ಎಲ್ಲ ಕಾರಣದಿಂದಾಗಿ ಪ್ರತಾಪ್ ಸಿಂಹ ಶೇರ್ ಮಾಡಿರುವ ಫೋಟೋ ಮತ್ತು ಬರಹ ಮಹತ್ವ ಪಡೆದುಕೊಂಡಿದೆ.
ವಿರೋಧಿ ಪಕ್ಷದ ಮಾಜಿ ಸಂಸದೆಯನ್ನು ‘ನನ್ನ ನೆಚ್ಚಿನ ನಟಿ’ ಎಂದು ಕರೆಯುವುದರ ಹಿಂದೆ ಏನಾದರೂ ಉದ್ದೇಶವಿದೆಯಾ? ಎಂದು ಕೆಲವರು ಪ್ರಶ್ನೆ ಮಾಡಿದ್ದರೆ, ಇನ್ನೂ ಕೆಲವರು ‘ರಮ್ಯಾ ಅವರನ್ನು ಹಲವು ಬಾರಿ ಟೀಕಿಸಿದ್ದೀರಿ. ಈಗ ನೆಚ್ಚಿನ ನಟಿ ಎನ್ನುತ್ತಿರಲ್ಲ ಹೇಗೆ? ಎಂದೂ ಪ್ರಶ್ನೆ ಮಾಡಿದ್ದಾರೆ. ರಮ್ಯಾ ಏನಾದರೂ ಬಿಜೆಪಿಗೆ ಸೇರ್ಪಡೆಯಾಗುತ್ತಾರಾ? ಎಂದು ಹಲವರು ಕೇಳಿದ್ದೂ, ಇದಕ್ಕೆಲ್ಲಾ ಪ್ರತಾಪ್ ಸಿಂಹ ಉತ್ತರಿಸಿದ್ದಾರೆ.
ರಮ್ಯಾ ನನ್ನ ನೆಚ್ಚಿನ ನಟಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರನ್ನು ನಟಿಯಾಗಿ ಮೆಚ್ಚಿಕೊಂಡಿದ್ದೇನೆ. ರಾಜಕೀಯವಾಗಿ ಈಗಲೂ ಟೀಕಿಸುವೆ. ರಾಜಕಾರಣ ಬೇರೆ, ಕಲೆ ಬೇರೆ ಎಂದು ಪ್ರತಾಪ್ ಉತ್ತರಿಸಿದ್ದಾರೆ. ಇದು ಇತ್ತೀಚೆಗೆ ನಟ ರಿಷಬ್ ಶೆಟ್ಟಿ ಮಗಳ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ತೆಗೆದ ಫೋಟೋವಾಗಿದೆ.