ರಮೇಶ್ ಅರವಿಂದ್ ನಿರೂಪಣೆಯ ಖ್ಯಾತ ಶೋ ವೀಕೆಂಡ್ ವಿತ್ ರಮೇಶ್ ಸೀಸನ್ 5 ಕಾರ್ಯಕ್ರಮಕ್ಕೆ ಮೊದಲ ಅತಿಥಿಯಾಗಿ ಆಗಮಿಸಿದ್ದ ನಟಿ ರಮ್ಯಾ ತಮ್ಮ ಜೀವನದ ಹಿಂದಿನ ದಿನಗಳನ್ನು ಮೆಲುಕು ಹಾಕಿದ್ದಾರೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹಲವು ಖುಷಿಯನ್ನು ಹಂಚಿಕೊಂಡಿದ್ದ ನಟಿ ರಮ್ಯಾ ಕೆಲವೊಂದು ದುಃಖದ ವಿಚಾರಗಳನ್ನು ತೋಡಿಕೊಂಡಿದ್ದಾರೆ.
ವೀಕೆಂಡ್ ವಿತ್ ರಮೇಶ್ ವೇದಿಕೆಯಲ್ಲಿ ತಮ್ಮ ರಾಜಕೀಯ ಜೀವನ ನೆನಪಿಸಿಕೊಂಡ ರಮ್ಯಾ, ಅಚಾನಕ್ಕಾಗಿ ರಾಜಕೀಯಕ್ಕೆ ಎಂಟ್ರಿ ಕೊಟ್ಟೆ. ಆದರೆ ಅದೇ ಸಮಯದಲ್ಲಿ ತಂದೆಯನ್ನು ಕಳೆದುಕೊಂಡಿದ್ದು ನನ್ನ ಜೀವನದ ಬಹಳ ದುಃಖದ ಹಾಗೂ ಕಷ್ಟದ ಸಮಯವಾಗಿತ್ತು. ಅಪ್ಪ ತೀರಿಕೊಂಡ ಹತ್ತು ದಿನದಲ್ಲೇ ನಾನು ಪಾರ್ಲಿಮೆಂಟ್ಗೆ ಎಂಟ್ರಿ ಕೊಟ್ಟಿದ್ದೆ. ಮಂಡ್ಯ ಜನರ ಪ್ರೀತಿಯನ್ನು, ಅವರು ನೀಡಿದ ಧೈರ್ಯವನ್ನು ಮರೆಯುವಂತಿಲ್ಲ ಎಂದರು. ತಂದೆ ಕಳೆದುಕೊಂಡು ದುಃಖದಲ್ಲಿದ್ದ ತನ್ನನ್ನು ರಾಹುಲ್ ಗಾಂಧಿಯವರು ಆ ನೋವಿನಿಂದ ಹೊರ ತಂದರು ಎಂದು ರಮ್ಯಾ ಹೇಳಿದ್ದಾರೆ.
ನನ್ನ ತಂದೆ ನಿಧನ ಹೊಂದಿದಾಗ ನನ್ನ ಜೀವನವನ್ನ ಕೊನೆ ಮಾಡಿಕೊಳ್ಳಬೇಕು ಅಂದ್ಕೊಂಡಿದ್ದೆ. ಆಗ ನನಗೆ ತುಂಬಾ ರಾಹುಲ್ ಗಾಂಧಿ ಸಹಾಯ ಮಾಡಿದ್ರು. ಸಾವು ಅಂದ್ರೇನು ಬದುಕು ಅಂದ್ರೇನು ನಾವು ಏನಕ್ಕೆ ಬಂದಿದ್ದೇವೆ ಅಂತಾ ಧೈರ್ಯ ತುಂಬಿದ ಆ ನೋವಿನಿಂದ ಆಚೆ ಬರುವಂತೆ ಮಾಡಿದರು ಎಂದು ರಮ್ಯಾ ನೆನಪಿಸಿಕೊಂಡಿದ್ದಾರೆ.
