ಮಾರ್ಚ್ 6 ರಂದು ಪಶ್ಚಿಮ ಬಂಗಾಳಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು, ಭೇಟಿ ನೀಡಲಿದ್ದಾರೆ. ಪರಗಣ ಜಿಲ್ಲೆಯ ಬರಾಸತ್ನಲ್ಲಿ ಮಹಿಳಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆಯಿದೆ. ಸಂದೇಶ್ಖಾಲಿಯಲ್ಲಿ ಸಂತ್ರಸ್ತರನ್ನೂ ಪ್ರಧಾನಿಯವರು ಭೇಟಿ ಮಾಡಬಹುದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್ ಹೇಳಿದ್ದಾರೆ.
“ಪ್ರಧಾನಿ ಮಾರ್ಚ್ 6 ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಬರಾಸತ್ನಲ್ಲಿ ಮಹಿಳಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ನಮಗೆ ತಿಳಿದು ಬಂದಿದೆ” ಎಂದು ಮಜುಂದಾರ್ ಸುದ್ದಿಗಾರರಿಗೆ ತಿಳಿಸಿದರು.
ಸಂದೇಶ್ಖಾಲಿ ದ್ವೀಪದ ಮಹಿಳೆಯರನ್ನು ಪ್ರಧಾನಿ ಭೇಟಿ ಮಾಡುತ್ತಾರೆಯೇ ಎಂಬ ಪ್ರಶ್ನೆಗೆ, ಮಜುಂದಾರ್ “ಸಂದೇಶ್ಖಾಲಿಯ ಸಹೋದರಿಯರು ಮತ್ತು ತಾಯಂದಿರು ಪ್ರಧಾನಿ ಮೋದಿಯನ್ನು ಭೇಟಿ ಮಾಡಲು ಬಯಸಿದರೆ, ನಾವು ಖಂಡಿತವಾಗಿಯೂ ಅದನ್ನು ವ್ಯವಸ್ಥೆ ಮಾಡುತ್ತೇವೆ” ಎಂದಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಫೆಬ್ರವರಿ 28 ರಂದು ಪಶ್ಚಿಮ ಬಂಗಾಳಕ್ಕೆ ಎರಡು ದಿನಗಳ ಭೇಟಿ ನೀಡುವ ಸಾಧ್ಯತೆ ಇದೆ.
ಸಂದೇಶ್ಖಾಲಿಯಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ತೃಣಮೂಲ ಕಾಂಗ್ರೆಸ್ನ ಪ್ರಬಲ ವ್ಯಕ್ತಿ ಶಾಜಹಾನ್ ಶೇಖ್ ಮತ್ತು ಅವರ ಬೆಂಬಲಿಗರು ತಮ್ಮ ಮೇಲೆ ಬಲವಂತ ಮಾಡಿ “ಭೂ ಕಬಳಿಕೆ ಮತ್ತು ಲೈಂಗಿಕ ದೌರ್ಜನ್ಯ” ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.ಈ ಆರೋಪಗಳು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಿಂದ ತನಿಖೆಗೆ ಪ್ರೇರೇಪಿಸಿವೆ. ಪರಿಶಿಷ್ಟ ಪಂಗಡಗಳ ಸಮಿತಿಯು ಇಂದು ದ್ವೀಪಕ್ಕೆ ಭೇಟಿ ನೀಡಿದಾಗ, NHRC ಸತ್ಯಗಳನ್ನು ಖಚಿತಪಡಿಸಿಕೊಳ್ಳಲು ತಂಡವನ್ನು ನಿಯೋಜಿಸುವುದಾಗಿ ಹೇಳಿದೆ.