ಮಲಯಾಳಂ ಸಿನಿಮಾಗಳ ನಿರ್ದೇಶಕ ರಂಜಿತ್ ಕೇರಳ ಚಲನಚಿತ್ರ ಅಕಾಡೆಮಿ ಅಧ್ಯಕ್ಷ್ಯ ಸ್ಥಾನಕ್ಕೆ ಹಾಗೂ ನಟ ಸಿದ್ಧಿಕಿ ಮಲಯಾಳಂ ಸಿನಿಮಾ ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನ್ಯಾ.ಹೇಮಾ ಸಮಿತಿ ವರದಿ ನಂತರ ಈ ಬೆಳವಣಿಗೆ ನಡೆದಿದೆ.
ರಂಜಿತ್ ಅವರು ತನ್ನ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ಕಳೆದ ವರ್ಷ ಬಂಗಾಳಿ ನಟಿಯೊಬ್ಬರು ಆರೋಪಿಸಿದ್ದರು. ರಂಜಿತ್ ಅವರಿಗೆ ರಾಜೀನಾಮೆ ನೀಡುವಂತೆ ಒತ್ತಡ ಹೇರಲಾಗಿತ್ತು. ಇನ್ನೂ ಸಿದ್ಧಿಕಿ ಅವರು ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ನಟಿಯೊಬ್ಬರು ಶನಿವಾರ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಇಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ರಂಜಿತ್ ಅವರು ಸುದ್ದಿವಾಹಿನಿಯೊಂದಕ್ಕೆ ಆಡಿಯೋ ತುಣುಕನ್ನು ಕಳುಹಿಸುವ ಮೂಲಕ ತಮ್ಮ ರಾಜೀನಾಮೆ ನಿರ್ಧಾರ ಘೋಷಿಸಿದ್ದಾರೆ. ಆಡಿಯೋದಲ್ಲಿ, ಅಕಾಡೆಮಿಯ ಅಧ್ಯಕ್ಷ ಸ್ಥಾನ ವಹಿಸಿಕೊಂಡಾಗಿನಿಂದ ಒಂದು ವರ್ಗದ ಜನ ನನ್ನನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದಾರೆ. ಆರೋಪಗಳೆಲ್ಲವೂ ಸುಳ್ಳು ಎಂದು ಸಮಾಜದ ಎದುರು ಸಾಬೀತು ಮಾಡಬೇಕಿದೆ ಎಂದು ಅವರು ಆಡಿಯೊದಲ್ಲಿ ಹೇಳಿದ್ದಾರೆ.
ಸಿದ್ದಿಕಿ ಅವರ ರಾಜೀನಾಮೆ ಪತ್ರವನ್ನು ಎಎಂಎಂಎ ಅಧ್ಯಕ್ಷ ಮತ್ತು ನಟ ಮೋಹನ್ಲಾಲ್ ಅವರಿಗೆ ಕಳುಹಿಸಿದ್ದಾರೆ. ಸಿದ್ದಿಕಿಯವರ ನಿರ್ಧಾರವನ್ನು ಸಂಘದ ಹಲವು ಸದಸ್ಯರು ಸ್ವಾಗತಿಸಿದ್ದಾರೆ.