ಹಮಾಸ್ ಉಗ್ರರ ದಾಳಿ ಕುರಿತಂತೆ ಇಸ್ರೇಲ್ ಸೈನ್ಯಾಧಿಕಾರಿಗಳಿಂದ ನಡೆಸುತ್ತಿರುವ ತನಿಖೆಯಲ್ಲಿ ಹಮಾಸ್ಗೆ ಸೇರಿದ ತಂದೆ ಹಾಗೂ ಮಗ ಇಸ್ರೇಲ್ ಮಹಿಳೆಯೊಬ್ಬರ ಮೇಲೆ ಅತ್ಯಾಚಾರವೆಸಗಿ, ಬರ್ಬರವಾಗಿ ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಆರೋಪಿಗಳನ್ನು ವಿಚಾರಣೆ ಮಾಡುತ್ತಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕಳೆದ ವರ್ಷದ ಅಕ್ಟೋಬರ್ 7ರಂದು ಇಸ್ರೇಲ್ ನಗರಗಳ ಮೇಲೆ ಹಮಾಸ್ ಉಗ್ರರು ದಾಳಿ ಮಾಡಿದ್ದರು. ಹಮಾಸ್ ಉಗ್ರರಾದ ಜಮಾಲ್ ಹುಸೇನ್ ಅಹ್ಮದ್ ರಾದಿ ಹಾಗೂ ಅವನ ಮಗ ಅಬ್ದುಲ್ಲಾ ಗಾಜಾ ಗಡಿ ಬಳಿ ಇರುವ ಕಿಬ್ಬುಟ್ಜ್ ನೀರ್ ಒಜ್ ಪ್ರದೇಶದ ಮನೆಯೊಂದಕ್ಕೆ ನುಗ್ಗಿದ್ದರು. ಅಲ್ಲಿದ್ದ ಮಹಿಳೆಯನ್ನು ವಿವಸ್ತ್ರಗೊಳಿಸಿ ಜಮಾಲ್ ಅತ್ಯಾಚಾರವೆಸಗಿದ್ದ. ಅವನ ಮಗ ಅಬ್ದುಲ್ಲಾ ಹಾಗೂ ಅವನ ಸಹೋದರ ಅತ್ಯಾಚಾರವೆಸಗಿದ ಅನಂತರ, ತಂದೆ ಜಮಾಲ್ ಮಹಿಳೆಯನ್ನು ಹತ್ಯೆ ಮಾಡಿದ ಎಂದು ಅವರಿಬ್ಬರೂ ತನಿಖೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ.
ಹಮಾಸ್ ಉಗ್ರರು ತಮ್ಮ ಒತ್ತೆಸೆರೆಯಲ್ಲಿರಿಸಿಕೊಂಡಿರುವವರ ಮೇಲೆ ನಡೆಸುತ್ತಿರುವ ಅಮಾನುಷ ಕೃತ್ಯಗಳನ್ನು ವಿಶ್ವ ಸಮುದಾಯ ತೀವ್ರವಾಗಿ ಖಂಡಿಸಿದೆ. ಹಮಾಸ್ ಉಗ್ರರ ಈ ಅಮಾನವೀಯ ಕೃತ್ಯಗಳನ್ನು ಸಹಿಸಲಾಗದು. ಅಮಾಯಕ ನಾಗರಿಕರ ವಿರುದ್ಧ ನಡೆಸುತ್ತಿರುವ ಇಂತಹ ಪೈಶಾಚಿಕ ಕೃತ್ಯಗಳು ವಿಶ್ವಶಾಂತಿಗೆ ಭಂಗ ತರುವಂಥದ್ದಾಗಿದೆ ಎಂದು ವಿಶ್ವ ನಾಯಕರು ಹಮಾಸ್ ನಾಯಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏತನ್ಮಧ್ಯೆ ವಿಶ್ವಸಂಸ್ಥೆ ಕೂಡ ಹಮಾಸ್ ಉಗ್ರರ ಕೃತ್ಯಗಳ ಬಗೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.