ಸಹನಟಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಮಲಯಾಳಂ ನಟ ಸಿದ್ದಿಕ್ ಗೆ ಸುಪ್ರೀಂ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಸಿದ್ದಿಕ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್ವಜಾಗೊಳಿಸಿತ್ತು. ಸಂತ್ರಸ್ತೆ ಹಲವು ವರ್ಷಗಳಿಂದ ಪದೇ ಪದೆ ತಮ್ಮ ವಿರುದ್ಧ ಆಧಾರರಹಿತ ಸುಳ್ಳು ಆರೋಪ ಹೊರಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಹೀಗಾಗಿ ತಮಗೆ ನಿರೀಕ್ಷಣಾ ಜಾಮೀನು ನೀಡುವಂತೆ ಮನವಿ ಮಾಡಿದ್ದರು. ಇದೀಗ ಸುಪ್ರೀಂ ಕೋರ್ಟ್ ಸಿದ್ದಿಕ್ ಗೆ ಜಾಮೀನು ಮಂಜೂರು ಮಾಡಿದೆ.
ತಿರುವನಂತಪುರಂ ಮ್ಯೂಸಿಯಂ ಪೊಲೀಸ್ ಠಾಣೆಯಲ್ಲಿ ಸಿದ್ದಿಕ್ ವಿರುದ್ಧ ಪ್ರಕರಣ ದಾಖಲಾಗಿದೆ. ಸಂತ್ರಸ್ತೆ ನೀಡಿದ ದೂರಿನಾಧಾರದಲ್ಲಿ ಪೊಲೀಸರು ಜಾಮೀನು ರಹಿತ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳ ಬಗ್ಗೆ ತನಿಖೆ ನಡೆಸಲು ರಚನೆಯಾಗಿರುವ ವಿಶೇಷ ತನಿಖಾ ತಂಡದ ಎದುರು ಸಂತ್ರಸ್ತೆ ತನ್ನ ಹೇಳಿಕೆ ದಾಖಲಿಸಿದ್ದಳು.
ಕೆಲವು ತಿಂಗಳ ಹಿಂದೆ ಮಲಯಾಳಂ ನಟ ಸಿದ್ದಿಕ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. 2016ರಲ್ಲಿ ಸಿದ್ದಿಕ್ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ನಟಿಯೊಬ್ಬರು ನೀಡಿರುವ ದೂರನ್ನು ಆಧರಿಸಿ ಮ್ಯೂಸಿಯಂ ಪೊಲೀಸ್ ಠಾಣೆಯಲ್ಲಿ ನಟನ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2016ರಲ್ಲಿ ಲೈಂಗಿಕ ದೌರ್ಜನ್ಯ ನಡೆದಿರುವ ಆರೋಪ ಕೇಳಿಬಂದಿರುವುದರಿಂದ, ಐಪಿಸಿ ಅಡಿಯಲ್ಲೇ ಪ್ರಕರಣ ದಾಖಲಿಸಲಾಗಿದೆ. 2009ರಲ್ಲಿ ಪಲೇರಿ ಮಾಣಿಕ್ಯಂ ಚಿತ್ರದಲ್ಲಿ ನಟಿಸಲು ಆಹ್ವಾನಿಸಿದ್ದ ನಿರ್ದೇಶಕರು, ಲೈಂಗಿಕ ಉದ್ದೇಶದಿಂದ ಅನುಚಿತವಾಗಿ ಸ್ಪರ್ಶಿಸಿದ್ದರು ಎಂದು ನಟಿ ಆರೋಪಿಸಿದ್ದರು. ಸಿದ್ದಿಕ್ ತಮ್ಮ ವಿರುದ್ಧದ ಆರೋಪದ ನಂತರ ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಅಮ್ಮ) ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಮೇಲೆ ವ್ಯವಸ್ಥಿತ ಲೈಂಗಿಕ ದೌರ್ಜನ್ಯದ ಬಗ್ಗೆ ಆಘಾತಕಾರಿ ವಿವರಗಳನ್ನು ಬಹಿರಂಗಪಡಿಸಿದ ಹೇಮಾ ಸಮಿತಿಯ ವರದಿ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮಲಯಾಳಂ ನಟರ ವಿರುದ್ಧ ಮೀಟೂ ಕೇಸ್ ದಾಖಲಾಗಿವೆ. ಇತ್ತೀಗಷ್ಟೇ ನಟ ನಿವಿನ್ ಪೌಲಿ ವಿರುದ್ಧ ಕೇಸ್ ಖುಲಾಸೆಗೊಂಡಿತ್ತು.