ಪಾಟ್ನಾ : ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಸತತ 10 ವರ್ಷ ತಂದೆ ಅತ್ಯಾಚಾರ ಮಾಡಿರುವ ಘೋರ ಘಟನೆ ಬಿಹಾರದಲ್ಲಿ ನಡೆದಿದೆ. ಗಂಡು ಮಗು ಆಗ್ಲಿ ಅಂತ ಮಾಂತ್ರಿಕರೊಬ್ಬರ ಸಲಹೆಯ ಮೇರೆಗೆ ವ್ಯಕ್ತಿಯೊಬ್ಬ ತನ್ನ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ವರ್ಷಗಳ ಕಾಲ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ನಡೆದಿದೆ. ಬಿಹಾರದ ಬಕ್ಸರ್ ಜಿಲ್ಲೆಯಲ್ಲಿ ಈ ಪ್ರಕರಣ ವರದಿಯಾಗಿದ್ದು, ಸಾಮಾಜಿಕ ವಿಜ್ಞಾನಿಗಳು ಈ ಬಗ್ಗೆ ಆತಂಕಗೊಂಡಿದ್ದಾರೆ.
ಇನ್ನು, ಈ ಪ್ರಕರಣ ಹಳೆಯದಾಗಿದ್ದು, ಬಕ್ಸಾರ್ ಜಿಲ್ಲೆಯ ಸ್ಥಳೀಯ POCSO ನ್ಯಾಯಾಲಯವು ಆರೋಪಿ ತಂದೆ ಬಿನೋದ್ ಕುಮಾರ್ ಸಿಂಗ್ ಮತ್ತು ತಂತ್ರಿ ಅಜಯ್ ಕುಮಾರ್ಗೆ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಅಲ್ಲದೆ, ಅತ್ಯಾಚಾರಕ್ಕೆ ಪ್ರೇರೇಪಿಸಿದ ಸಂತ್ರಸ್ತ ಹೆಣ್ಣುಮಕ್ಕಳ ತಾಯಿ ಹಾಗೂ ಚಿಕ್ಕಮ್ಮನಿಗೆ 20 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
ಕಳೆದ ಒಂದು ದಶಕದಿಂದ ಅಪ್ರಾಪ್ತ ಸಹೋದರಿಯರಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿತ್ತು. ಬಳಿಕ ಸಂತ್ರಸ್ತ ಬಾಲಕಿಯರು ಕೊನೆಗೂ ಪೊಲೀಸರಿಗೆ ವಿಷಯ ತಿಳಿಸಿದ್ದು, ನಂತರ ಅವರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು, ಈ ಬಗ್ಗೆ ಗುರುವಾರ ಪ್ರತಿಕ್ರಿಯೆ ನೀಡಿದ ಸಾಮಾಜಿಕ ವಿಜ್ಞಾನಿ ಪ್ರೊಫೆಸರ್ ಸಚೀಂದ್ರ ನಾರಾಯಣ್, ಇಂತಹ ಘಟನೆ ಸಾಕಷ್ಟು ಆತಂಕಕಾರಿಯಾಗಿದ್ದು, ಸೂಕ್ತ ಕ್ರಮ ಕೈಗೊಳ್ಳದ ಹೊರತು ಧಾರ್ಮಿಕ ಸಾಮಾಜಿಕ ಮೌಲ್ಯಗಳನ್ನು ನಾಶಪಡಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಪಿತೃಪ್ರಧಾನ ಮೌಲ್ಯ ವ್ಯವಸ್ಥೆಗೆ ಮಹಿಳೆಯರು ಸಾಕಷ್ಟು ಸವಾಲು ಹಾಕುವವರೆಗೂ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. “ಇದು (ಘಟನೆ) ಲಿಂಗ ತಾರತಮ್ಯವಲ್ಲ; ಬದಲಿಗೆ ಇದು ಅಸ್ತಿತ್ವದಲ್ಲಿರುವ ಪಿತೃಪ್ರಭುತ್ವದ ವ್ಯವಸ್ಥೆಯ ಫಲಿತಾಂಶವಾಗಿದೆ, ಮತ್ತು ಇದನ್ನು ಮಹಿಳೆಯರೇ ಪ್ರಶ್ನಿಸುವವರೆಗೆ, ಅಂತಹ ವಿಷಯಗಳು ಮುಂದುವರಿಯುತ್ತವೆ” ಎಂದು ಮತ್ತೊಬ್ಬ ಸಾಮಾಜಿಕ ವಿಜ್ಞಾನಿ ಪ್ರೊಫೆಸರ್ ಬಿ. ಎನ್. ಪ್ರಸಾದ್ ಎಚ್ಚರಿಸಿದ್ದಾರೆ.