ನವದೆಹಲಿ: ನಟಿ-ರಾಜಕಾರಣಿ ಕಂಗನಾ ರೈತರ ಪ್ರತಿಭಟನೆಯ ಸಂದರ್ಭದಲ್ಲಿ ಅತ್ಯಾಚಾರ ನಡೆದಿದೆ ಎಂದು ಆರೋಪಿಸಿದ್ದರು. ಅವರ ಹೇಳಿಕೆ ವಿರೋಧಿಸಲು ಮುಂದಾಗಿ ಪಂಜಾಬ್ ಮಾಜಿ ಸಂಸದ ಸಿಮ್ರಂಜಿತ್ ಸಿಂಗ್ ಮಾನ್ ವಿವಾದಕ್ಕೆ ಸಿಲುಕಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅತ್ಯಾಚಾರ ಹೇಗೆ ನಡೆಯುತ್ತವೆ ಎಂದು ಕಂಗನಾರನ್ನು ಕೇಳಿ.
ಆಕೆಗೆ ಅದರ ಅನುಭವವಿದೆ ಎಂದು ನಾಲಿಗೆ ಹರಿಬಿಟ್ಟಿದ್ದಾರೆ.
ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ ಕಂಗನಾ ರಣಾವತ್, ರೈತರ ಚಳುವಳಿ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ರೈತ ಹೋರಾಟ ನಿಗ್ರಹಿಸುವ ಸಂಬಂಧ ಕಠಿಣ ನಿಲುವುಗಳನ್ನು ಕೈಗೊಂಡಿತು. ನಾಯಕರು ಬಲವಾಗಿರದಿದ್ದರೆ ಅಥವಾ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನಮ್ಮ ದೇಶದಲ್ಲೂ ಬಾಂಗ್ಲಾದೇಶದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಮುಂದಿನ ದಿನಗಳಲ್ಲಿ ಈ ರೀತಿಯ ಹೇಳಿಕೆಗಳನ್ನು ನೀಡದಂತೆ ಕಂಗನಾ ಅವರಿಗೆ ಬಿಜೆಪಿ ಎಚ್ಚರಿಕೆ ನೀಡಿತ್ತು.
ಗುಜರಾತ್ ಗಲಭೆ ವೇಳೆ ಸಾಮೂಹಿಕ ಅತ್ಯಾಚಾರಕ್ಕೆ ತುತ್ತಾಗಿದ್ದ ಮಹಿಳೆ ಎಂದು ಕಂಗನಾ ಬಿಂಬಿಸಿದ್ದು ವಿವಾದವಾಗಿತ್ತು. ಅಷ್ಟೇ ಅಲ್ಲ, ಮಹಿಳೆಯರು ಕೇವಲ 100 ರೂ. ಕೂಲಿಗೆ ಧರಣಿ ಮಾಡಲು ಬರುತ್ತಾರೆ ಎಂದೂ ನಾಲಿಗೆ ಹರಿಬಿಟ್ಟಿದ್ದರು. ಈ ಹೇಳಿಕೆ ಆಧಾರದ ಮೇಲೆ ಪಂಜಾಬ್ ಮಾಜಿ ಸಂಸದ ಸಿಮ್ರಂಜಿತ್ ಸಿಂಗ್ ಮಾನ್ ನಟಿ-ಸಂಸದೆ ಕಂಗನಾ ವಿರುದ್ಧ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.