ಬೆಂಗಳೂರು: ಬೆಂಗಳೂರಿನಲ್ಲಿ ರ್ಯಾಪಿಡೋ ಬೈಕ್ ನಿಷೇಧಿಸುವಂತೆ ಒತ್ತಾಯಿಸಿ ಆಟೋ ಚಾಲಕರು ಕೊಟ್ಟಿರುವ ಮುಷ್ಕರಕ್ಕೆ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಸಾಥ್ ಕೊಟ್ಟಿದ್ದಾರೆ. ರಾಜಧಾನಿಯಲ್ಲಿ ವಿದಾನಸಭಾ ಚುನಾವಣೆಯ ತಯಾರಿ ಗರಿಗೆದರಿದ್ದು, ಮತದಾರರನ್ನ ಸೆಳೆಯಲು ಇನ್ನಿಲ್ಲದ ಕಸರತ್ತನ್ನು ರಾಜಕೀಯ ನಾಯಕರು ಮಾಡುತ್ತಿದ್ದಾರೆ. ಅದರ ಭಾಗವಾಗಿ ಗಾಂಧಿನಗರ ವಿಧಾನ ಸಭಾ ಕ್ಷೇತ್ರದಲ್ಲಿ ದಿನೇಶ್ ಗುಂಡುರಾವ್ ಆಕ್ಟೀವ್ ಆಗಿದ್ದು, ಆಟೋ ಚಾಲಕರ ಮುಷ್ಕರಕ್ಕೆ ಸಾಥ್ ಕೊಟ್ಟಿದ್ದಾರೆ.
ಆಟೋ ಚಾಲಕರಿಗೆ ಯೂನಿಫಾರಂ ನೀಡುವ ಮೂಲಕ ಮುಷ್ಕರಕ್ಕೆ ಬೆಂಬಲ ಸೂಚಿಸಿ ಬಳಿಕ ಮಾತನಾಡಿದರು. ರ್ಯಾಪಿಡೋ ಬೈಕ್ ಟ್ಯಾಕ್ಸಿ ಗಳಿಂದ ಆಟೋ ಚಾಲಕರ ಜೀವನ ಹಾಳಾಗುತ್ತಿದೆ. ಆಟೋ ಚಾಲಕರ ಜೀವನ ನಿತ್ಯವೂ ನರಕ ಆಗುತ್ತಿದೆ. ರ್ಯಾಪಿಡೋ ಬೈಕ್ ಗಳಿಂದ ಆಟೋ ಚಾಲಕರ ಜೀವನ ಕಸಿದಿದೆ. ಹೀಗಾಗಿ ರ್ಯಾಪಿಡೋ ಬೈಕ್ ಗಳನ್ನ ನಗರದಲ್ಲಿ ಬ್ಯಾನ್ ಮಾಡಬೇಕು. ಬ್ಯಾನ್ ಆಗಲಿಲ್ಲ ಅಂದ್ರೆ ಕಾಂಗ್ರೆಸ್ ಪಕ್ಷದಿಂದ ಹೋರಾಟ ಖಚಿತ ಎಂದು ಶ್ರೀರಾಮಪುರದಲ್ಲಿ ಕಾಂಗ್ರೆಸ್ ಮುಖಂಡ ಸತ್ಯ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಶಾಸಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ.