ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸಿನಿ ಇಂಡಸ್ಟ್ರಿಗೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ ಯಾರು ಊಹಿಸಿರದ ಮಟ್ಟಿಗೆ ಬೆಳೆಯುತ್ತಿದ್ದಾರೆ. ರಾತ್ರೋ ರಾತ್ರಿ ನ್ಯಾಷನಲ್ ಕ್ರಶ್ ಎನಿಸಿಕೊಂಡ ನಟಿ ಇದೀಗ ಬಹುಭಾಷಾ ನಟಿಯಾಗಿ ಬ್ಯುಸಿಯಾಗಿದ್ದಾರೆ.
ಕನ್ನಡದ ಬಳಿಕ ಟಾಲಿವುಡ್ ನಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಯಾವುದೇ ಸ್ಟಾರ್ ನಟನಾದ್ರು ತಮ್ಮ ಚಿತ್ರಕ್ಕೆ ರಶ್ಮಿಕಾನೇ ನಾಯಕಿಯಾಗ್ಬೇಕು ಅಂತ ಹಠ ಹಿಡಿಯುವ ಮಟ್ಟಿಗೆ ರಶ್ಮಿಕಾ ಹವಾ ಕ್ರಿಯೇಟ್ ಮಾಡಿದ್ದಾರೆ.
ಇಂಡಸ್ಟ್ರಿಗೆ ಎಂಟ್ರಿಕೊಟ್ಟ ಕೆಲವೇ ಕೆಲವು ವರ್ಷಗಳಲ್ಲಿ ರಶ್ಮಿಕಾ ಸ್ಟಾರ್ ನಟಿಯರನ್ನೇ ಹಿಂದಿಕ್ಕುವ ಮಟ್ಟಿಗೆ ಬೆಳೆದು ಬಿಟ್ಟಿದ್ದಾರೆ. ಕಳೆದ 20 ವರ್ಷಗಳಿಂದ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮದೇ ಹವಾ ಕ್ರಿಯೇಟ್ ಮಾಡಿಕೊಂಡು ಬಂದಿರುವ ನಟಿ ತ್ರಿಷಾ ಹಾಗೂ ನಯನತಾರಾರನ್ನೇ ರಶ್ಮಿಕಾ ಹಿಂದಿಕ್ಕಿದ್ದಾರೆ.
ನಟಿಯರು ಹೆಚ್ಚು ಜನಪ್ರಿಯರಾದಷ್ಟೂ ಅವರ ಸಂಭಾವನೆ ಹೆಚ್ಚಾಗುತ್ತದೆ, ಅದರ ಪ್ರಕಾರ ನಯನತಾರಾ ಮತ್ತು ತ್ರಿಶಾ ಇಬ್ಬರೂ ಇಲ್ಲಿಯವರೆಗೆ ಪ್ರತಿ ಚಿತ್ರಕ್ಕೆ 10 ರಿಂದ 12 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.
ಆದ್ರೆ ರಶ್ಮಿಕಾ ಮಂದಣ್ಣ ಈ ಇಬ್ಬರನ್ನು ಸಂಭಾವನೆಯಲ್ಲಿ ಹಿಂದಿಕ್ಕಿದ್ದಾರೆ. ಗೀತ ಗೋವಿಂದಂ, ವಾರಿಸು, ಪುಷ್ಪ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಪಡೆದವರು ರಶ್ಮಿಕಾ ಮಂದಣ್ಣ. ಸಲ್ಮಾನ್ ಖಾನ್ ಅಭಿನಯದ ಎಆರ್ ಮುರುಗದಾಸ್ ಅವರ ಮುಂಬರುವ ಚಿತ್ರ ‘ಸಿಕಂದರ್’ ಚಿತ್ರದಲ್ಲಿ ನಟಿಸಲು ರಶ್ಮಿಕಾ ಮಂದಣ್ಣ15 ಕೋಟಿ ರೂಪಾಯಿ ಸಂಭಾವನೆ ಕೇಳಿದ್ದಾರೆ.
ಆ ನಂತರ ನಡೆದ ಮಾತುಕತೆಯಲ್ಲಿ ನಿರ್ಮಾಣ ಸಂಸ್ಥೆ 13 ಕೋಟಿ ಸಂಭಾವನೆ ನೀಡಲು ಮುಂದಾಗಿದೆ ಎಂದು ವರದಿಯಾಗಿದೆ. ಭಾರೀ ಸಂಭಾವನೆ ಪಡೆಯುವ ನಟಿಯರಲ್ಲಿ ರಶ್ಮಿಕಾ ಮಂದಣ್ಣ ಕೂಡ ಒಬ್ಬರಾಗಿದ್ದಾರೆ.
ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ಸ್ಥಾನಮಾನ ಪಡೆದಿರುವ ರಶ್ಮಿಕಾ ಮಂದಣ್ಣ ಸದ್ಯ ಸಕ್ಸಸ್ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಟಾಲಿವುಡ್ ನಲ್ಲಿ ಹಲವು ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿದ ಚೆಲುವೆ ಬಾಲಿವುಡ್ ನಲ್ಲೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಫ 2 ಸಿನಿಮಾ ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ. ಇತ್ತೀಚೆಗೆ ಹಿಂದಿಯಲ್ಲಿ ಪ್ಯಾನ್ ಇಂಡಿಯಾ ಫಿಲ್ಮ್ ಅನಿಮಲ್ ನಲ್ಲಿ ರಶ್ಮಿಕಾ ನಟಿಸಿದ್ರು. ಈ ಸಿನಿಮಾ ಸೂಪರ್ ಹಿಟ್ ಆಗಿದ್ದು ಇದೀಗ ಮತ್ತೊಂದು ಬಾಲಿವುಡ್ ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ.