ನವದೆಹಲಿ: ಹೊಸ ಸಂಸತ್ ಭವನವನ್ನು ಶವಪೆಟ್ಟಿಗೆಗೆ (Coffin) ಹೋಲಿಸಿ ಟ್ವೀಟ್ ಮಾಡಿದ ರಾಷ್ಟ್ರೀಯ ಜನತಾ ದಳದ (Rashtriya Janata Dal) ವಿರುದ್ಧ ದೇಶದ್ರೋಹದ ಪ್ರಕರಣವನ್ನು ದಾಖಲಿಸಲು ಬಿಜೆಪಿ (BJP) ಮುಂದಾಗಿದೆ. ಶವಪೆಟ್ಟಿಗೆಯ ಆಕಾರಕ್ಕೆ ಹೋಲಿಸಿದ ಟ್ವೀಟ್ಗೆ ಬಿಜೆಪಿ, ಆರ್ಜೆಡಿ (RJD) ವಿರುದ್ಧ ವಾಗ್ದಾಳಿ ನಡೆಸಿದೆ. ಅಲ್ಲದೆ ಟ್ವಿಟರ್ ಪೋಸ್ಟ್ನ ಹಿಂದೆ ಇರುವವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಹೇಳಿಕೊಂಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಸುಶೀಲ್ ಕುಮಾರ್ ಮೋದಿಯವರು, ಹೊಸ ಸಂಸತ್ತಿನ ಕಟ್ಟಡವನ್ನು ಸಾರ್ವಜನಿಕ ಹಣದಿಂದ ನಿರ್ಮಿಸಲಾಗಿದೆ. ಅದನ್ನು ಶವ ಪೆಟ್ಟಿಗೆಗೆ ಹೋಲಿಸಿರುವುದು ದುರದೃಷ್ಟಕರ ವಿಷಯವಾಗಿದೆ. ಅಲ್ಲದೆ ಸಂಸತ್ ಉದ್ಘಾಟನೆ ಬಹಿಷ್ಕರಿಸಿರುವವರು ಸಂಸತ್ತಿನ ಕಲಾಪಕ್ಕೆ ಹಾಜರಾಗುತ್ತಾರೆ. ಅವರೇನು ಶಾಶ್ವತವಾಗಿ ಸಂಸತ್ತನ್ನು ಬಹಿಷ್ಕರಿಸಲು ನಿರ್ಧರಿ ಸಿದ್ದಾರಾ? ಅವರ ಲೋಕಸಭೆ ಮತ್ತು ರಾಜ್ಯಸಭೆಯ ಸ್ಥಾನಗಳಿಗೆ ರಾಜೀನಾಮೆ ನೀಡುತ್ತಾರೆಯೇ? ಎಂದು ಕುಟುಕಿದ್ದಾರೆ.
ಇಂದು ಶವಪೆಟ್ಟಿಗೆಗೆ ಹೋಲಿಸಿದವರನ್ನು, ದೇಶದ ಜನರು 2024 ರಲ್ಲಿ ಅದೇ ಶವಪೆಟ್ಟಿಗೆಯಲ್ಲಿ ಹೂಳುತ್ತಾರೆ. ಜನರು ಪ್ರಜಾಪ್ರಭುತ್ವದ ಹೊಸ ಮಂದಿರವನ್ನು ಪ್ರವೇಶಿಸಲು ನಿಮಗೆ ಅವಕಾಶ ನೀಡುವುದಿಲ್ಲ ಎಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಕಿಡಿಕಾರಿದ್ದಾರೆ. ಆರ್ಜೆಡಿಯ ಟ್ವೀಟ್ ಸಮರ್ಥಿಸಿಕೊಂಡಿರುವ ಪಕ್ಷದ ಮುಖಂಡ ಶಕ್ತಿ ಸಿಂಗ್ ಯಾದವ್, ನಮ್ಮ ಟ್ವೀಟ್ನಲ್ಲಿರುವ ಶವಪೆಟ್ಟಿಗೆಯು ಬಿಜೆಪಿ ಪ್ರಜಾಪ್ರಭುತ್ವವನ್ನು ಸಮಾಧಿ ಮಾಡುತ್ತಿರುವುದನ್ನು ಪ್ರತಿನಿಧಿಸುತ್ತದೆ ಎಂದಿದ್ದಾರೆ.