ಬೆಳಗಾವಿ: ರಾಜ್ಯದಲ್ಲಿ ಡಿಸಿ, ಸಿಇಓ ಹಾಗೂ ಕಮಿಷನರ್ʼಗಳಿಗೆ ರೇಟ್ ಫಿಕ್ಸ್ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಗಂಭೀರ ಆರೋಪ ಮಾಡಿದ್ದಾರೆ. ಬೆಳಗಾವಿ ಪೊಲೀಸ್ ಕಮಿಷನರ್ (Belagavi Police Commissioner) ನೇಮಕವಾಗದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಡಿಸಿಗಳಿಗೆ, ಸಿಇಓಗಳಿಗೆ, ಕಮಿಷನರ್ ಗಳಿಗೆ ರೇಟ್ ಫಿಕ್ಸ್ ಆಗಿದೆ. ರೇಟ್ ಕುದುರುವವರೆಗೂ ಯಾರು ನೇಮಕ ಆಗಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಸರ್ಕಾರಕ್ಕೆ ನಾಚಿಕೆ ಆಗಬೇಕು.
ಇಂತಹ ಪ್ರದೇಶದಲ್ಲಿ ಕಮಿಷನರ್ ನೇಮಕ ಆಗದೇ ಇರೋದು ನಾಚಿಕ ವಿಷಯವಾಗಿದೆ. ಹೀಗಾದ್ರೆ ಕಾನೂನು ಸುವ್ಯವಸ್ಥೆ ಏನಾಗಬಹುದು. ಕಾನೂನು ಸುವ್ಯವಸ್ಥೆ ಕಾಪಾಡೊದು ಹೇಗೆ?. ರಾಜ್ಯದ ಅಭಿವೃದ್ಧಿ, ಶಾಂತಿ ಚಿಂತನೆ ಮಾಡುವುದುದು ಬಿಟ್ಟು ಇಂತಹ ವ್ಯವಹಾರದಲ್ಲಿ ಕುಳಿತಿದೆ. ಜನರ ಅಭಿವೃದ್ಧಿ ಬಗ್ಗೆ ಚಿಂತನೆ ಇಲ್ಲ, ಲೋಕಸಭೆ ಚುನಾವಣೆ ಈ ರೀತಿ ಮಾಡ್ತಿದ್ದಾರೆ. 5 ವರ್ಷ ಸರ್ಕಾರ ನಡೆಸುತ್ತೇವೆ ಅಂತಾ ವಿಶ್ವಾಸವಿಲ್ಲ, ಈಗಲೇ ತುಂಬಿಕೊಳ್ಳುವ ವ್ಯವಸ್ಥೆ ಮಾಡುತ್ತಿದ್ದಾರೆ ಎಂದರು.
ಇಲಾಖೆಗಳಲ್ಲಿನ ಅಧಿಕಾರಿಗಳ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ನಮಗೆ 40% ಸರ್ಕಾರ ಅಂತಾ ಹೇಳಿದರು. ಆದರೆ ಯಾವುದೇ ಪುರಾವೆ ಕೊಡಲಿಲ್ಲ. ಈಗ ಕಾಂಗ್ರೆಸ್ ನದ್ದು 80% ಸರ್ಕಾರವಾಗಿದೆ. ಎಲ್ಲ ಇಲಾಖೆಗಳ ವರ್ಗಾವಣೆ ದಂಧೆ ಅಂಗಡಿಗಳಲ್ಲಿ ಇಟ್ಟುಕೊಂಡಿದ್ದಾರೆ. ಇಂದು ಅಂಗಡಿಗಳ ವ್ಯಾಪಾರವಾಗಿದೆ, ಬಾಗಿಲು ತೆರೆದು ಕುಳಿತಿದ್ದಾರೆ. ಅಂಗಡಿಗಳಲ್ಲಿ ಫಿಕ್ಸ್ ಮಾಡಿದ್ದಾರೆ. ಒಂದೊಂದು ಇಲಾಖೆಗಳಲ್ಲಿ ರೇಟ್ ಫಿಕ್ಸ್ ಮಾಡಿದ್ದಾರೆ. ಇದು ವ್ಯಾಪಾರೀಕರಣ ಆಗುತ್ತಿದೆ ಎಂದರು.
ಬಿಜೆಪಿ (BJP) ಆರೋಪಕ್ಕೆ ಯಾವುದೇ ರೀತಿ ಸರ್ಕಾರ ತಲೆಕೆಡಿಸಿಕೊಳ್ಳದ ವಿಚಾರಕ್ಕೆ ಈ ಸರ್ಕಾರ ತಲೆಯಲ್ಲಿ ಅಂಹಕಾರ, ಮದ ತುಂಬಿರುವಾಗ ನಾವೇ ಶ್ರೇಷ್ಠರೆಂಬ ದುರಂಹಂಕಾರ ಇದೆ. ಜನರು ಇದಕ್ಕೆ ತಕ್ಕ ಪಾಠ ಕಲಿಸುತ್ತಾರೆ. ಒಳ್ಳೆಯ ಅಭಿವೃದ್ಧಿ ಕೆಲಸಕ್ಕೆ ಬಿಜೆಪಿ ಸಹಕಾರ ಇರುತ್ತದೆ. ನಾವು ರಾಜಕಾರಣ ಮಾಡಲ್ಲ ಎಂದರು.