ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದಿಂದ ಹಿರಿಯ ವೇಗಿ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಿಲು ಪ್ರಮುಖ ಕಾರಣವೇನೆಂದು ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಬಹಿರಂಗಪಡಿಸಿದ್ದಾರೆ. ಉಭಯ ತಂಡಗಳ ನಡುವಣ ನಾಲ್ಕನೇ ಟೆಸ್ಟ್ ನಾಳೆಯಿಂದ (ಶುಕ್ರವಾರ) ರಾಂಚಿ ಜೆಎಸ್ಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ.
ಕಳೆದ ಮೂರು ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದ ಜಸ್ಪ್ರೀತ್ ಬುಮ್ರಾ ಅವರನ್ನು ವರ್ಕ್ಲೋಡ್ ಮ್ಯಾನೇಜ್ಮೆಂಟ್ ಸಲುವಾಗಿ ನಾಲ್ಕನೇ ಟೆಸ್ಟ್ ಪಂದ್ಯದಿಂದ ವಿಶ್ರಾಂತಿ ನೀಡಲಾಗಿದೆ. ಆರಂಭಿಕ ಮೂರು ಪಂದ್ಯಗಳಿಂದ ಜಸ್ಪ್ರೀತ್ ಬುಮ್ರಾ ಅವರು 17 ವಿಕೆಟ್ಗಳನ್ನು ಕಬಳಿಸಿದ್ದಾರೆ. ಆ ಮೂಲಕ ಈ ಟೆಸ್ಟ್ ಸರಣಿಯಲ್ಲಿ ಸದ್ಯ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.
ನಾಲ್ಕನೇ ಟೆಸ್ಟ್ ಪಂದ್ಯದ ನಿಮಿತ್ತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ಎಲ್ಲಾ ಪಂದ್ಯಗಳನ್ನು ಆಡಿ ಎಂದು ಸಲಹೆ ನೀಡಲು ಸಾಧ್ಯವಾಗುವುದಿಲ್ಲ. ಆದರೆ, ಅವರು ಸಂಪೂರ್ಣವಾಗಿ ಫಿಟ್ ಇದ್ದಾರೆಂದು ನಾವು ಈ ವೇಳೆ ಸ್ಪಷ್ಟನೆ ನೀಡುತ್ತೇವೆ. ವಿಶಾಖಪಟ್ಟಣಂ ಟೆಸ್ಟ್ ಪಂದ್ಯದ ಗೆಲುವಿನಲ್ಲಿ ಬುಮ್ರಾ ಭಾರತ ತಂಡದ ಪರ ನಿರ್ಣಾಯಕ ಪಾತ್ರವನ್ನು ವಹಿಸಿದ್ದರು. ಈ ಪಂದ್ಯದಲ್ಲಿ ಅವರು ಒಟ್ಟು 9 ವಿಕೆಟ್ಗಳನ್ನು ಕಬಳಿಸಿದ್ದರು. ಭಾರತ ಈ ಪಂದ್ಯದಲ್ಲಿ 106 ರನ್ಗಳಿಂದ ಗೆಲುವು ಪಡೆದಿತ್ತು.