ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿ ಬಳಿಯ ಫಾರ್ಮ್ಹೌಸ್ನಲ್ಲಿ ಮೇ 15ರಂದು ಆಯೋಜಿಸಿದ್ದ ರೇವ್ ಪಾರ್ಟಿ ಪ್ರಕರಣ ಸಾಕಷ್ಟು ಸುದ್ದಿಯಾಗಿತ್ತು. ಈ ಪ್ರಕರಣದಲ್ಲಿ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಅಧಿಕಾರಿಗಳು ಇತ್ತೀಚೆಗೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಇದರಲ್ಲಿ ತೆಲುಗು ನಟಿ ಹೇಮಾ ಡ್ರಗ್ಸ್ ಸೇವನೆ ಮಾಡಿರುವುದು ಕನ್ಪಾರ್ಮ್ ಆಗಿದೆ.
ಬೆಂಗಳೂರಿನಲ್ಲಿ ನಡೆದ ಈ ರೇವ್ ಪಾರ್ಟಿ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ವಾಸು ಎಂಬಾತ ಈ ಪಾರ್ಟಿಯನ್ನು ಆಯೋಜನೆ ಮಾಡಿದ್ದು,\ಈ ಪಾರ್ಟಿಗೆ ಅನೇಕ ಸೆಲೆಬ್ರಿಟಿಗಳಿಗೆ ಆತ ಆಹ್ವಾನ ನೀಡಿದ್ದ. ಈ ಈವೆಂಟ್ನಲ್ಲಿ ತೆಲುಗು ನಟಿ ಹೇಮಾ ಕೂಡ ಭಾಗಿ ಆಗಿದ್ದರು. ಆದರೆ ವಿಚಾರಣೆ ವೇಳೆ ನಟಿ ತಾನು ರೇವ್ ಪಾರ್ಟಿಯಲ್ಲಿ ಇರಲೇ ಇಲ್ಲ ಎಂದು ಹೇಳಿದ್ದರು. ಅಲ್ಲದೆ ಘಟನೆ ನಡೆದ ಸಂದರ್ಭದಲ್ಲಿ ನಾನು ನನ್ನ ಮನೆಯಲ್ಲೇ ಇದ್ದೆ ಎಂದಿದ್ದರು. ಆದ್ರೆ ಬಳಿಕ ನಟಿ ತಾನು ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದಾಗಿ ತಪ್ಪೊಪ್ಪಿಕೊಂಡಿದ್ದರು.
ಪೊಲೀಸ್ ಇನ್ಸ್ಪೆಕ್ಟರ್ ಲಕ್ಷ್ಮೀನಾರಾಯಣ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆದಿದೆ. ಅವರು ನ್ಯಾಯಾಲಯಕ್ಕೆ 1,086 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ನಟಿ ಹೇಮಾ ಎಂಡಿಎಂಎ ಸೇವಿಸಿದ್ದರು ಎಂದು ಉಲ್ಲೇಖಿಸಲಾಗಿದೆ. ವೈದ್ಯಕೀಯ ಪರೀಕ್ಷೆಯ ವರದಿಗಳನ್ನು ಕೂಡ ಲಗತ್ತಿಸಲಾಗಿದೆ. ಪಾರ್ಟಿಯಲ್ಲಿ ಭಾಗವಹಿಸಿದ್ದ ಇನ್ನೋರ್ವ ನಟಿಗೆ ಡ್ರಗ್ಸ್ ಪರೀಕ್ಷೆ ನೆಗೆಟಿವ್ ಬಂದಿದೆ. ಅವರನ್ನು ಸಾಕ್ಷಿ ಎಂದು ಪರಿಗಣಿಸಲಾಗಿದೆ.
ಚಾರ್ಜ್ಶೀಟ್ನಲ್ಲಿ ಒಟ್ಟು 88 ಮಂದಿಯನ್ನು ಆರೋಪಿಗಳೆಂದು ಪರಿಗಣಿಸಲಾಗಿದೆ. ವಾಸು ಮತ್ತು ಆತನ ಸ್ನೇಹಿತರು, ಚಿತ್ತೂರು ಜಿಲ್ಲೆಯ ದಂತವೈದ್ಯ ರಣಧೀರ್ ಬಾಬು, ಕೋರಮಂಗಲದ ಅರುಣ್ ಕುಮಾರ್, ಮೊಹಮ್ಮದ್ ಅಬೂಬಕರ್ ಮತ್ತು ನೈಜೀರಿಯಾ ಪ್ರಜೆ ಆಗಸ್ಟಿನ್ ದಾದಾ ಎಂಬುವರು ಪಾರ್ಟಿ ಆಯೋಜಿಸಿ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಆರೋಪ ಹೊತ್ತಿದ್ದಾರೆ. ಉಳಿದ 79 ಮಂದಿ ಡ್ರಗ್ಸ್ ಸೇವನೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ.
ಆರೋಪಿಗೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ರೂ. 10,000 ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ ಇದೆ. ನ್ಯಾಯಾಲಯದ ವಿವೇಚನೆಯಿಂದ ಜೈಲು ಶಿಕ್ಷೆ ಮತ್ತು ದಂಡ ಎರಡನ್ನೂ ವಿಧಿಸಬಹುದು. ಪೊಲೀಸರು ಆರೋಪಿಯ ಕರೆ ವಿವರಗಳ ದಾಖಲೆ (ಸಿಡಿಆರ್) ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಸ್ಥಳದಲ್ಲಿ ಎಂಡಿಎಂಎ ಮಾತ್ರೆಗಳು, ಎಂಡಿಎಂಎ ಕ್ರಿಸ್ಟಲ್, ಐದು ಗ್ರಾಂ ಕೊಕೇನ್, ಕೊಕೇನ್ ಲೇಪಿತ 500 ರೂಪಾಯಿ ನೋಟು, 6 ಕೆಜಿ ಹೈಡ್ರೋ ಗಾಂಜಾ, 5 ಮೊಬೈಲ್ ಫೋನ್, ಫೋಕ್ಸ್ ವ್ಯಾಗನ್ ಕಾರು, ಲ್ಯಾಂಡ್ ರೋವರ್ ಕಾರು ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.