ಕಳೆದ ಎರಡು ದಿನಗಳ ಹಿಂದೆ ನಟಿ ರವೀನಾ ಟಂಡನ್ ಕಾರು ಅಪಘಾತಕ್ಕೆ ಈಡಾಗಿತ್ತು. ರವೀನಾ ಟಂಡನ್ ಕಾರು ಚಾಲಕ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಮೂವರಿಗೆ ಗಾಯಗೊಳಿಸಿದ್ದ ಎನ್ನಲಾಗಿತ್ತು. ಅಲ್ಲದೆ ನಟಿ ರವೀನಾ ಕೂಡ ಕುಡಿದಿದ್ದು ಈ ವೇಳೆ ಕೆಟ್ಟದಾಗಿ ಮಾತನಾಡಿದ್ದಾರೆ ಎಂದೆಲ್ಲಾ ಹೇಳಲಾಗಿತ್ತು. ಮುಂಬೈನ ಖಾರ್ ಪೊಲೀಸ್ ಠಾಣೆಯಲ್ಲಿ ರವೀನಾ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆದರೆ ಅಸಲಿ ಸಂಗತಿ ಏನು ಎಂದು ಡಿಸಿಪಿ ರಾಜ್ ತಿಲಕ್ ರೋಷನ್ ತಿಳಿಸಿದ್ದಾರೆ.
ರವೀನಾ ಟಂಡನ್ ಕಾರು ಮೂವರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಗಾಯಗಳಾಗಿವೆ ಎಂದು ಹೇಳಲಾಗಿತ್ತು. ನಟಿಯ ವಿರುದ್ಧ ಕಿಡಿಕಾರಿದ್ದರು. ಅವರ ಮೇಲೆ ಹಲ್ಲೆ ಕೂಡ ಮಾಡಲಾಗಿತ್ತು. ಅಸಲಿಗೆ, ಸುಳ್ಳು ದೂರನ್ನು ದೂರುದಾರರು ನೀಡಿರುವ ಬಗ್ಗೆ ಡಿಸಿಪಿ ಸ್ಪಷ್ಟನೆ ನೀಡಿದ್ದಾರೆ. ಅವರ ಕಾರು ಯಾರಿಗೂ ಡಿಕ್ಕಿ ಹೊಡೆದಿಲ್ಲ ಮತ್ತು ರವೀನಾ ಅಂದು ಕುಡಿದಿರಲಿಲ್ಲ. ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದಾಗ ಅಸಲಿ ವಿಚಾರ ಹೊರಬಿದ್ದಿದೆ ಎಂದು ಡಿಸಿಪಿ ಸ್ಪಷ್ಟನೆ ನೀಡಿದ್ದಾರೆ.
ರವೀನಾ ಅವರು ಕಾರಿನಲ್ಲಿ ಮನೆಗೆ ಬರುತ್ತಿದ್ದರು. ಅವರ ಕಾರನ್ನು ರಿವರ್ಸ್ ತೆಗೆದುಕೊಳ್ಳಲಾಗಿತ್ತು. ಆದರೆ ಕಾರು ಯಾರಿಗೂ ಟಚ್ ಮಾಡಿಲ್ಲ. ಆದರೂ ಅಲ್ಲಿ ಮಾತಿನ ಚಕಮಕಿ ನಡೆದು ಈ ಘಟನೆ ವಿವಾದ ಸೃಷ್ಟಿಸಿದೆ. ಘಟನೆಯ ವೇಳೆ, ನಟಿ ಕಾರಿನಿಂದ ಹೊರಬಂದಿದ್ದು, ಜಗಳವಾಡಲು ಅಲ್ಲ. ಬದಲಾಗಿ ತನ್ನ ಚಾಲಕನನ್ನು ರಕ್ಷಿಸಲು ಎಂದು ಹೇಳಿದ್ದಾರೆ. ಈ ಘಟನೆಯಲ್ಲಿ ಯಾರಿಗೂ ಯಾವುದೇ ಗಾಯಗಳಾಗಲಿಲ್ಲ ಎಂದು ಎಂಬುದು ಸಿಸಿಟಿವಿ ದೃಶ್ಯಾವಳಿಯಿಂದ ಸಾಬೀತಾಗಿದೆ. ಇದೆಲ್ಲಾ ಸುಳ್ಳು ಆರೋಪ ಎಂದು ಹೇಳಿದ್ದಾರೆ.