ಲಂಡನ್: ಆಸ್ಟ್ರೇಲಿಯಾ ವಿರುದ್ದ 2023ರ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಸೋಲು ಅನುಭವಿಸಿದ ಬಳಿಕ ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಪ್ರಶ್ನೆಗಳು ಎದುರಾಗಿವೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಮುಂಬರುವ ಒಡಿಐ ವಿಶ್ವಕಪ್ ಟೂರ್ನಿಯಲ್ಲಿಯೂ ಸೆಮಿಫೈನಲ್ ತಲುಪುವುದಿಲ್ಲವೆಂದು ಟೀಮ್ ಇಂಡಿಯಾ ಮಾಜಿ ಹೆಡ್ ಕೋಚ್ ರವಿ ಶಾಸ್ತ್ರಿ ಎಚ್ಚರಿಕೆ ನೀಡಿದ್ದಾರೆ.
ವಿರಾಟ್ ಕೊಹ್ಲಿಯಿಂದ ರೋಹಿತ್ ಶರ್ಮಾ ನಾಯಕತ್ವ ವಹಿಸಿಕೊಂಡ ಬಳಿಕ ಭಾರತ ತಂಡ, ಮೂರು ಮಹತ್ತರ ಟೂರ್ನಿಗಳಲ್ಲಿ ವೈಫಲ್ಯ ಅನುಭವಿಸಿದೆ. 2022ರ ಏಷ್ಯಾ ಕಪ್ ಟೂರ್ನಿಯಲ್ಲಿ ವೈಫಲ್ಯ ಅನುಭವಿಸಿದ್ದ ಭಾರತ ತಂಡ, ನಂತರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ನಲ್ಲಿ ಸೋತಿತ್ತು. ಇದೀಗ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ 209 ರನ್ಗಳ ಭಾರಿ ಅಂತರದಲ್ಲಿ ಸೋಲು ಅನುಭವಿಸಿದೆ.
“ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಐಸಿಸಿ ಟ್ರೋಫಿ ಮುಡಗೇರಿಸಿಕೊಳ್ಳಲಿದೆ ಎಂದು ಜನರು ತಪ್ಪು ಕಲ್ಪನೆಯನ್ನು ಹೊಂದಿದ್ದರು. ಆದರೆ, ಮುಂದಿನ ಏಕದಿನ ವಿಶ್ವಕಪ್ ಟೂರ್ನಿಯಲ್ಲಿಯೂ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಸೆಮಿಫೈನಲ್ ತಲುಪಲಿದೆ ಎಂದು ನಾನು ಭಾವಿಸುವುದಿಲ್ಲ,” ಎಂದು ರವಿ ಶಾಸ್ತ್ರಿ ಟ್ವೀಟ್ ಮಾಡಿದ್ದಾರೆ.
ಇದಕ್ಕೂ ಮುನ್ನ ಸ್ಟಾರ್ ಸ್ಪೋರ್ಟ್ಸ್ ಚರ್ಚೆಯಲ್ಲಿ ರವಿ ಶಾಸ್ತ್ರಿ, ಐಪಿಎಲ್ ಟೂರ್ನಿಯಲ್ಲಿ ಆಡುವುದು ಅಥವಾ ಬಿಡುವುದು ಆಟಗಾರರ ನಿರ್ಧಾರಕ್ಕೆ ಬಿಡಬೇಕು. ಬಿಸಿಸಿಐ ಒಂದು ಕಡೆ ಕುಳಿತು ಐಪಿಎಲ್ನ ಎಲ್ಲಾ ಫ್ರಂಚೈಸಿಗಳ ಬಳಿ ಬಗ್ಗೆ ಚರ್ಚೆ ನಡೆಸಬೇಕು. ಈ ರೀತಿ ಮಾಡುವುದರಿಂದ ಭವಿಷ್ಯದಲ್ಲಿ ಇದು ಭಾರತ ತಂಡಕ್ಕೆ ನೆರವಾಗಬಹುದು ಎಂದಿದ್ದಾರೆ.
“ಇದು ಭವಿಷ್ಯದಲ್ಲಿ ನಡೆಯುವುದು ಅನುಮಾನ. ಹಾಗಾಗಿ ನಾವು ವಾಸ್ತವವಾಗಿರೋಣ. 20 ದಿನಗಳ ಕಾಲ ನೀವು ಹೊರಗುಳಿಯಬೇಕೆಂದು ಬಯಸಿದರೆ, ಐಪಿಎಲ್ ಟೂರ್ನಿಯನ್ನು ನೀವು ಬಿಡಬೇಕಾಗುತ್ತದೆ. ಈ ವಿಷಯದಲ್ಲಿ ಆಟಗಾರರ ಆಯ್ಕೆ ಇರಬೇಕು. ಇದನ್ನು ಜಾರಿಗೆಗೊಳಿಸಬೇಕಾದ ಅಗತ್ಯವಿದೆ. ಭವಿಷ್ಯದಲ್ಲಿ ಬಿಸಿಸಿಐ ಇದನ್ನು ಪರಿಶೀಲಿಸಲಿದೆ ಎಂದು ನನಗೆ ಖಾತ್ರಿಯಿದೆ,” ಎಂದು ರವಿ ಶಾಸ್ತ್ರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.