ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪ್ಲೇ-ಆಫ್ಸ್ ಹಾದಿ ಮುಚ್ಚಿದೆ ಎಂದು ಮಾಜಿ ಆಲ್ರೌಂಡರ್ ಹಾಗೂ ಜನಪ್ರಿಯ ಕ್ರಿಕೆಟ್ ಕಾಮೆಂಟೇಟರ್ ಇರ್ಫಾನ್ ಪಠಾಣ್ ಭವಿಷ್ಯ ನುಡಿದಿದ್ದಾರೆ. ಐಪಿಎಲ್ 2024 ಟೂರ್ನಿಯಲ್ಲಿ ಆರ್ಸಿಬಿ ಆಡಿದ ಮೊದಲ 7 ಪಂದ್ಯಗಳಲ್ಲಿ 6 ಸೋಲುಂಡಿದೆ. ಸನ್ರೈಸರ್ಸ್ ಹೈದರಾಬಾದ್ ಎದುರು ಸೋಮವಾರ ನಡೆದ ಹೈ ಸ್ಕೋರಿಂಗ್ ಪಂದ್ಯದಲ್ಲಿ ಚಾಲೆಂಜರ್ಸ್ 25 ರನ್ಗಳ ಸೋಲನುಭವಿಸಿದ ಬೆನ್ನಲ್ಲೇ ಇರ್ಫಾನ್ ಪಠಾಣ್ ತಂಡದ ಭವಿಷ್ಯ ನಿರ್ಧಾರ ಮಾಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಂದು ತಂಡವಾಗಿ ಕಳಪೆ ಪ್ರದರ್ಶನ ನೀಡಿದೆ. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ನಲ್ಲೂ ಹಲವು ಪಂದ್ಯಗಳಲ್ಲಿ ನಿರಾಶೆ ಮೂಡಿಸಿದೆ. ಪ್ರಮುಖವಾಗಿ ತಂಡದ ಬೌಲಿಂಗ್ ವಿಭಾಗದ ಪ್ರದರ್ಶನ ಹೀನಾಯವಾಗಿದ್ದು, ಸನ್ರೈಸರ್ಸ್ ಹೈದರಾಬಾದ್ ಎದುರು ದಾಖಲೆಯ 287/3 ರನ್ ಹೊಡೆಸಿಕೊಂಡಿರುವುದೇ ಇದಕ್ಕೆ ಸಾಕ್ಷಿ. ಫೀಲ್ಡಿಂಗ್ ವಿಚಾರದಲ್ಲಿ ತಂಡದ ಸ್ಟಾರ್ ಪ್ಲೇಯರ್ಸ್ ವಿರಾಟ್ ಕೊಹ್ಲಿ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಕೂಡ ಕ್ಯಾಚ್ ಕೈಚೆಲ್ಲಿ ನಿರಾಶೆ ಮೂಡಿಸಿದ್ದಾರೆ.
ಆದರೂ ಬ್ಯಾಟಿಂಗ್ನಲ್ಲಿ ತಂಡದ ಪ್ರದರ್ಶನ ಉತ್ತಮವಾಗಿದೆ. ವಿರಾಟ್ ಕೊಹ್ಲಿ 7 ಪಂದ್ಯಗಳಿಂದ 361 ರನ್ಗಳಿಸಿದ ಆರೆಂಜ್ ಕ್ಯಾಪ್ ರೇಸ್ನಲ್ಲಿ ಮುಂದಿದ್ದಾರೆ. ಆದರೆ ಅವರ ಕೊಡುಗೆಯೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತ್ತಾಗಿದ್ದು, ಆರ್ಸಿಬಿ ಸತತ 5 ಪಂದ್ಯಗಳಲ್ಲಿ ಸೋತು ಸುಣ್ಣವಾಗಿದೆ. ಈ ಬಗ್ಗೆ ಮಾತನಾಡಿರುವ ಇರ್ಫಾನ್ ಪಠಾಣ್, ಪ್ರಸಕ್ತ ಟೂರ್ನಿಯಲ್ಲಿ ಆರ್ಸಿಬಿ ಹಾದಿ ಮುಚ್ಚಿದೆ. ಪ್ಲೇ ಆಫ್ಸ್ಗೆ ಅರ್ಹತೆ ಪಡೆಯಲು ಸಾಧ್ಯವೇ ಇಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
“ಆರ್ಸಿಬಿ ಅಭಿಯಾನ ಈ ಆವೃತ್ತಿಯಲ್ಲಿ ಬಹುತೇಕ ಅಂತ್ಯಗೊಂಡಿದೆ. ಸತತ 7 ಪಂದ್ಯಗಳನ್ನು ಗೆದ್ದು ಪ್ಲೇ ಆಫ್ಸ್ ರೇಸ್ನಲ್ಲಿ ಉಳಿಯುತ್ತೇವೆ ಎನ್ನುವುದು ಅಸಾಧ್ಯದ ಮಾತು. ಒಂದು ವೇಳೆ 16 ಅಂಕಗಳನ್ನು ಗಳಿಸಿದ್ದೇ ಆದರೂ ಪ್ಲೇ ಆಫ್ಸ್ ಟಿಕೆಟ್ ಖಾತ್ರಿ ಇತುವುದಿಲ್ಲ. ಅಲ್ಲಿ ನೆಟ್ ರನ್ರೇಟ್ ಲೆಕ್ಕಾಚಾರ ನಡೆಯುತ್ತದೆ. ಟೂರ್ನಿಯಲ್ಲಿ ತಂಡದ ಆಟಗಾರರು ನೀಡುರುವ ಪ್ರದರ್ಶನ ಗಮನಿಸಿ ಹೇಳುವುದಾದರೆ, ಈ ತಂಡದಲ್ಲಿ ಸಮತೋಲನ ಇಲ್ಲ. ಪ್ಲೇ ಆಫ್ಸ್ ತಲುಪಬೇಕಾದ ಆಟವನ್ನು ಈ ತಂಡ ಆಡಿಲ್ಲ ಎನ್ನಬಹುದು,” ಎಂದು ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಇರ್ಫಾನ್ ಪಠಾಣ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.