ಲಕ್ನೋ: ಸಂಘಟಿತ ಬೌಲಿಂಗ್ ದಾಳಿ ಹಾಗೂ ಉತ್ತಮ ಫೀಲ್ಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 18 ರನ್ಗಳ ಜಯ ಸಾಧಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 126 ರನ್ ಗಳನ್ನಷ್ಟೇ ಗಳಿಸಿತ್ತು. ಈ ಗುರಿ ಬೆನ್ನತ್ತಿದ್ದ ಲಕ್ನೋ ಸೂಪರ್ ಜೈಂಟ್ಸ್ 19.5 ಓವರ್ಗಳಲ್ಲಿ 108 ರನ್ ಗಳಿಸಿ ಸರ್ವಪತನಕಂಡಿತು. ಈ ಮೂಲಕ ತವರಿನಲ್ಲೇ ಸೋತು ಮುಖಭಂಗ ಅನುಭವಿಸಿತು
ಬೌಲಿಂಗ್ ಪಿಚ್ ಎನಿಸಿಕೊಂಡಿರುವ ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ಆರ್ಸಿಬಿ ರನ್ ಕದಿಯಲು ತಿಣುಕಾಡಿತ್ತು. ಕಳಪೆ ಬ್ಯಾಟಿಂಗ್ ಫಾರ್ಮ್ನಿಂದಾಗಿ ಈ ಆವೃತ್ತಿಯಲ್ಲಿ ಅತ್ಯಂತ ಕಡಿಮೆ ರನ್ ದಾಖಲಿಸಿತ್ತು. ಮೊದಲ ವಿಕೆಟ್ ಪತನಕ್ಕೆ 9 ಓವರ್ಗಳಲ್ಲಿ ಕೇವಲ 62 ರನ್ ಗಳನ್ನಷ್ಟೇ ದಾಖಲಿಸಿತ್ತು. ಮೊದಲ 10 ಓವರ್ಗಳಲ್ಲಿ 65 ರನ್ ಗಳಿಸಿದ್ದ ಆರ್ಸಿಬಿ, ಮುಂದಿನ 10 ಓವರ್ಗಳಲ್ಲಿ ಕೇವಲ 61 ರನ್ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು.
ಎಂದಿನಂತೆ ಆರಂಭಿಕರಾಗಿ ಕಣಕ್ಕಿಳಿದವರಲ್ಲಿ ವಿರಾಟ್ ಕೊಹ್ಲಿ ಹಾಗೂ ಡುಪ್ಲೆಸಿಸ್ ರನ್ ಗಳಿಸಿದ್ದು ಬಿಟ್ಟರೆ ಉಳಿದ ಅಗ್ರಕ್ರಮಾಂಕದ ಬ್ಯಾಟರ್ಗಳು ಕೈಚೆಲ್ಲಿದರು. ಆರ್ಸಿಬಿ ಪರ ವಿರಾಟ್ ಕೊಹ್ಲಿ 31 ರನ್, ಫಾಫ್ ಡು ಪ್ಲೆಸಿಸ್ 44 ರನ್ ಹಾಗೂ ದಿನೇಶ್ ಕಾರ್ತಿಕ್ 16 ರನ್ ಗಳಿಸಿದ್ದು ಬಿಟ್ಟರೆ, ಉಳಿದ ಯಾರೊಬ್ಬರೂ 10 ರನ್ ಸಹ ಗಳಿಸಲಿಲ್ಲ.
ಇತ್ತ ಚೇಸಿಂಗ್ ಆರಂಭಿಸಿದ ಲಕ್ನೋ ಸಹ ರನ್ ಆರ್ಸಿಬಿ ಬೌಲರ್ಗಳ ದಾಳಿಗೆ ತತ್ತರಿಸಿತು. ಪವರ್ ಪ್ಲೇನಲ್ಲೇ 34 ರನ್ ಗಳಿಗೆ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. 10ನೇ ಓವರ್ಗೆ 63 ರನ್ ಗಳಿಸಿತ್ತು. ಇನ್ನೂ 60 ಎಸೆತಗಳಲ್ಲಿ 64 ರನ್ಗಳ ಅಗತ್ಯವಿತ್ತು. 11ನೇ ಓವರ್ನಿಂದ 19ನೇ ಓವರ್ವರೆಗೆ ಕ್ರಮವಾಗಿ 2, 4, 1, 4, 4, 1, 8, 9, 8 ರನ್ ಸೇರ್ಪಡೆಯಾಯಿತು. ಗಾಯಕ್ಕೆ ತುತ್ತಾಗಿದ್ದರೂ ಕೊನೆಯಲ್ಲಿ ಕಣಕ್ಕಿಳಿದ ರಾಹುಲ್ ರನ್ ಗಳಿಸುವಲ್ಲಿ ವಿಫಲರಾದರು. ಕೊನೆಯ ಓವರ್ನಲ್ಲಿ ಬ್ಯಾಟಿಂಗ್ ಅವಕಾಶ ಸಿಕ್ಕರೂ ಕಾಲಿಗೆ ನೋವಾಗಿದ್ದರಿಂದ ರನ್ ಓಡಲು ಆಗದೇ ತಂಡವನ್ನು ಸೋಲಿ ಸುಳಿಗೆ ತಳ್ಳಿದರು. ಕೊನೆಯ ಓವರ್ನಲ್ಲಿ ಕೇವಲ 4 ರನ್ಗಳಷ್ಟೇ ಸೇರ್ಪಡೆಯಾಯಿತು.
ಲಕ್ನೋ ಸೂಪರ್ ಜೈಂಟ್ಸ್ ಪರ ಕೃಷ್ಣಪ್ಪ ಗೌತಮ್ 23 ರನ್, ಕೃನಾಲ್ ಪಾಂಡ್ಯ 14 ರನ್ ಮಾರ್ಕಸ್ ಸ್ಟೋಯ್ನಿಸ್ 13 ರನ್, ನವೀನ್-ಉಲ್-ಹಕ್ 13 ರನ್ ಗಳಿಸಿದರು. ಲಕ್ನೋ ಸೂಪರ್ ಜೈಂಟ್ಸ್ ಪರ ನವೀನ್-ಉಲ್-ಹಕ್ 3 ವಿಕೆಟ್ ಪಡೆದರೆ, ರವಿ ಬಿಷ್ಣೋಯಿ, ಅಮಿತ್ ಮಿಶ್ರಾ ತಲಾ 2 ವಿಕೆಟ್ ಕಿತ್ತರು. ಕೃಷ್ಣಪ್ಪ ಗೌತಮ್ 1 ವಿಕೆಟ್ ಪಡೆದರು. ಇನ್ನೂ ಆರ್ಸಿಬಿ ಪರ ಜೋಶ್ ಹ್ಯಾಜಲ್ವುಡ್, ಕರ್ಣ್ ಶರ್ಮಾ ತಲಾ ಎರಡು ವಿಕೆಟ್ ಕಿತ್ತರೆ, ಮೊಹಮ್ಮದ್ ಸಿರಾಜ್, ಗ್ಲೇನ್ ಮ್ಯಾಕ್ಸ್ವೆಲ್, ವಾನಿಂದು ಹಸರಂಗ, ಹರ್ಷಲ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.