ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಆಂತರಿಕ ವಿಷಯಗಳನ್ನ ಬಹಿರಂಗಪಡಿಸುವಂತೆ ಅಪರಿಚಿತ ವ್ಯಕ್ತಿಯೊಬ್ಬ ಆರ್ಸಿಬಿ ವೇಗಿ ಮೊಹಮ್ಮದ್ ಸಿರಾಜ್ಗೆ (Mohammed Siraj) ಕರೆ ಮಾಡಿದ್ದು, ಈ ಬಗ್ಗೆ ಸಿರಾಜ್ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ (BCCI Anti Corruption Unit) ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಆರ್ಸಿಬಿ ತಂಡ ಸೋಲಿನಿಂದಾಗಿ ಸಾಕಷ್ಟು ಹಣ ಕಳೆದುಕೊಂಡ ಬಳಿಕ ಅಪರಿಚಿತ ವ್ಯಕ್ತಿಯೊಬ್ಬ ಮೊಹಮ್ಮದ್ ಸಿರಾಜ್ಗೆ ಕರೆ ಮಾಡಿ, ಬೆಂಗಳೂರು ತಂಡದ ಆಂತರಿಕ ವಿಷಯಗಳ ಮಾಹಿತಿ ನೀಡುವಂತೆ ಒತ್ತಾಯಿಸಿದ್ದಾರೆ. ಕರೆ ಬಂದ ತಕ್ಷಣವೇ ಆರ್ಸಿಬಿ ವೇಗಿ ನಡೆದ ವಿಷಯವನ್ನ ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ ವರದಿ ಮಾಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ತನಿಖೆ ನಡೆಸಿದಾಗ, ಮೊಹಮ್ಮದ್ ಸಿರಾಜ್ ಅವರನ್ನ ಸಂಪರ್ಕಿಸಿದ್ದ ವ್ಯಕ್ತಿ ಬುಕ್ಕಿಯಲ್ಲ. ಈತ ಹೈದರಾಬಾದ್ನಲ್ಲಿ ಚಾಲಕನಾಗಿದ್ದು, ಐಪಿಎಲ್ (IPL 2023) ಪಂದ್ಯಗಳಲ್ಲಿ ಬೆಟ್ಟಿಂಗ್ ವ್ಯಸನಿಯಾಗಿದ್ದ. ಇದರಿಂದ ಅವರು ಸಾಕಷ್ಟು ಹಣ ಕಳೆದುಕೊಂಡಿದ್ದಾರೆ. ಈ ಕಾರಣದಿಂದ ಅವರು ಮೊಹಮ್ಮದ್ ಸಿರಾಜ್ ಅವರನ್ನ ಸಂಪರ್ಕಿಸಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
BCCI ಭ್ರಷ್ಟಾಚಾರ ನಿಗ್ರಹ ಘಟಕ ಹೇಳಿದ್ದೇನು?
ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಆಟಗಾರರು ಹಾಗೂ ಅಧಿಕಾರಿಗಳನ್ನ ಸಂಪರ್ಕಿಸಿದರೆ, ತಕ್ಷಣ ಅವರು ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ ಮಾಹಿತಿ ನೀಡಬೇಕು. ಇಲ್ಲದೇ ಇದ್ದಲ್ಲಿ ಅಂತಹ ಆಟಗಾರರು ಅಮಾನತು ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇದೆ. ಈ ವಿಷಯದಲ್ಲಿ ವಿಳಂಬ ಧೋರಣೆ ಅನುಸರಿಸಿದರೆ, ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕದ ಕಾರ್ಯ ಪ್ರಕ್ರಿಯೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಭ್ರಷ್ಟಚಾರ ನಿಗ್ರಹ ಘಟಕ ತಿಳಿಸಿದೆ.
ಟೀಂ ಇಂಡಿಯಾ ಮಾಜಿ ವೇಗಿ ಎಸ್ ಶ್ರೀಶಾಂತ್, ಅಂಕಿತ್ ಚವಾಣ್ ಹಾಗೂ ಅಜಿತ್ ಚಂಡೀಲಾ ಅವರು ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಫ್ರಿನ್ಸಿಪಾಲ್ ಗುರುನಾಥ್ ಮೇಯಪ್ಪನ್ ಅವರು ಕೂಡ ಇವರ ಜೊತೆ ಶಿಕ್ಷೆಗೆ ಒಳಗಾಗಿದ್ದರು. ಬಾಂಗ್ಲಾದೇಶ ಮಾಜಿ ನಾಯಕ ಶಕಿಬ್ ಅಲ್ ಹಸನ್ ಅವರು 2021ರಲ್ಲಿ ಭ್ರಷ್ಟಚಾರದ ಕುರಿತು ವರದಿ ಮಾಡುವಲ್ಲಿ ವಿಫಲರಾಗಿದ್ದರಿಂದ ಅವರು ಕೆಲ ತಿಂಗಳ ಕಾಲ ಅಮಾನತು ಶಿಕ್ಷೆಗೆ ಗುರಿಯಾಗಿದ್ದರು.
ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ದಳವನ್ನ ಬಲಿಷ್ಠಗೊಳಿಸಿದ್ದು, ಅಧಿಕಾರಿಗಳು ಹೋಟೆಲ್ ಹಾಗೂ ಮೈದಾನದಲ್ಲಿ ಎಲ್ಲಾ ತಂಡಗಳ ಆಟಗಾರರ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ. ಸದ್ಯ 2023ರ ಐಪಿಎಲ್ ಆವೃತ್ತಿಯಲ್ಲಿ ಈಗಾಗಲೇ ಆರ್ಸಿಬಿ ಪರ 5 ಪಂದ್ಯಗಳನ್ನಾಡಿರುವ ಮೊಹಮ್ಮದ್ ಸಿರಾಜ್ 8 ವಿಕೆಟ್ಗಳನ್ನ ಪಡೆದು ಮಿಂಚಿದ್ದಾರೆ.