ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ನಡುವಿನ ಪಂದ್ಯ ಯಾವಾಗಲೂ ಹೈವೋಲ್ಟೇಜ್ನಿಂದ ಕೂಡಿರುತ್ತದೆ. ವಿರಾಟ್ ಕೊಹ್ಲಿ ಅಭಿಮಾನಿಗಳು ಆರ್ಸಿಬಿಗೆ ಹಾಗೂ ಎಂ.ಎಸ್. ಧೋನಿ ಅಭಿಮಾನಿಗಳು ಸಿಎಸ್ಕೆಗೆ ಬೆಂಬಲ ಸೂಚಿಸುತ್ತಾರೆ. ಇಂದು (ಏಪ್ರಿಲ್ 17) ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ (RCB) ಹಾಗೂ ಸಿಎಸ್ಕೆ ಸೆಣೆಸಲಿವೆ. ಆರ್ಸಿಬಿಗೆ ಹೋಂ ಪಿಚ್ ಆಗಿರುವುದರಿಂದ ಗೆಲ್ಲಲೇಬೇಕು ಎನ್ನುವ ಹಂಬಲದಲ್ಲಿದೆ. ಇನ್ನು, ಹೋಂ ಗ್ರೌಂಡ್ನಲ್ಲಿ ಬೆಂಗಳೂರು ತಂಡವನ್ನು ಸೋಲಿಸಬೇಕು ಎಂಬ ನಿರೀಕ್ಷೆಯಲ್ಲಿ ಚೆನ್ನೈ ತಂಡ ಇದೆ. ಅಂತಿಮವಾಗಿ ಯಾರಿಗೆ ಗೆಲುವಿನ ಮಾಲೆ ಬೀಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಪಿಚ್ ರಿಪೋರ್ಟ್
ಚಿನ್ನಸ್ವಾಮಿ ಸ್ಟೇಡಿಯಂ ಬ್ಯಾಟ್ಸಮನ್ಗಳಿಗೆ ಸಹಕಾರಿ ಆಗಿದೆ. ಹೀಗಾಗಿ ದೊಡ್ಡ ಸ್ಕೋರ್ ನಿರೀಕ್ಷೆ ಮಾಡಬಹುದು. ಟಾಸ್ ಗೆದ್ದವರು ಚೇಸಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. ಹೀಗಾಗಿ, ಇಂದಿನ ಪಂದ್ಯದಲ್ಲಿ ಟಾಸ್ ಗೆಲ್ಲೋದು ಕೂಡ ತುಂಬಾನೇ ಮುಖ್ಯ.
ಹವಾಮಾನ ಹೇಗಿರಲಿದೆ?
ಬೆಂಗಳೂರಿನಲ್ಲಿ ನಡೆದ ಸಾಕಷ್ಟು ಐಪಿಎಲ್ ಮ್ಯಾಚ್ಗೆ ವರುಣ ಅಡ್ಡಿ ಮಾಡಿದ್ದಾನೆ. ಆದರೆ, ಈ ವರ್ಷ ಬೆಂಗಳೂರಿನಲ್ಲಿ ನಡೆದ ಪಂದ್ಯಗಳಿಗೆ ಮಳೆ ಅಡ್ಡಿ ಆಗಿಲ್ಲ. ಇಂದಿನ ಪಂದ್ಯಕ್ಕೂ ಮಳೆಯ ಅಡ್ಡಿ ಉಂಟಾಗುವುದಿಲ್ಲ. ಹವಾಮಾನ ವರದಿ ಪ್ರಕಾರ ಇಂದು ಆಗಸ ಸ್ವಚ್ಛವಾಗಿರಲಿದೆ. 7 ಗಂಟೆ ಸುಮಾರಿಗೆ ಬೆಂಗಳೂರಿನ ಟೆಂಪ್ರೇಚರ್ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ರಾತ್ರಿ 11ರ ವೇಳೆಗೆ 26 ಡಿಗ್ರಿಗೆ ಇಳಿಯಲಿದೆ.
ಅಂಕಿ ಅಂಶ
ಆರ್ಸಿಬಿ ಹಾಗೂ ಸಿಎಸ್ಕೆ ತಂಡಗಳು ಐಪಿಎಲ್ನಲ್ಲಿ ಒಟ್ಟು 30 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಆರ್ಸಿಬಿ ಗೆದ್ದಿರುವುದು ಕೇವಲ 10 ಬಾರಿ ಮಾತ್ರ. 19 ಬಾರಿ ಸಿಎಸ್ಕೆ ತಂಡ ಗೆದ್ದಿದೆ. ಇನ್ನು ಒಂದು ಪಂದ್ಯ ರದ್ದಾಗಿತ್ತು. ಈ ಸೀಸನ್ನಲ್ಲಿ ಸಿಎಸ್ಕೆ ಹಾಗೂ ಆರ್ಸಿಬಿ ತಲಾ 4 ಪಂದ್ಯಗಳನ್ನಾಡಿ ಎರಡು ಗೆದ್ದಿವೆ. ಈ ಮೂಲಕ ನಾಲ್ಕು ಅಂಕ ಗಳಿಸಿ ಅನುಕ್ರಮವಾಗಿ ಆರು ಹಾಗೂ ಏಳನೇ ಸ್ಥಾನದಲ್ಲಿವೆ.
ಎಲ್ಲಿ ವೀಕ್ಷಿಸಬಹುದು?
ಟಾಸ್ ರಾತ್ರಿ 7 ಗಂಟೆಗೆ ನಡೆಯಲಿದೆ. ಪಂದ್ಯ 7.30ಕ್ಕೆ ಆರಂಭ ಆಗಲಿದೆ. ಜಿಯೋ ಸಿನಿಮಾಸ್ ಒಟಿಟಿ ಹಾಗೂ ಸ್ಟಾರ್ಸ್ ಸ್ಪೋರ್ಟ್ಸ್ನಲ್ಲಿ ಪಂದ್ಯ ವೀಕ್ಷಿಸಬಹುದು.