ಇಂಫಾಲ: ಈಶಾನ್ಯ ರಾಜ್ಯದ ಮಣಿಪುರ (Manipura) ಸಂಸದೀಯ ಕ್ಷೇತ್ರದ 11 ಮತಗಟ್ಟೆಗಳಲ್ಲಿ ಇಂದು (ಸೋಮವಾರ) ಮರು ಮತದಾನ ಆರಂಭವಾಗಿದೆ. ಶುಕ್ರವಾರ ನಡೆದ ಲೋಕಸಭಾ ಚುನಾವಣೆಯ (Loksabha Elections 2024) ಮೊದಲ ಹಂತದ ಮತದಾನದ ವೇಳೆ ಕೆಲವು ಕಿಡಿಗೇಡಿಗಳು ಈ ಮತಗಟ್ಟೆಗಳಲ್ಲಿ ಗುಂಡಿನ ದಾಳಿ ನಡೆಸಿ ಇವಿಎಂಗಳನ್ನು ಧ್ವಂಸಗೊಳಿಸಿದ್ದರು. ಬಳಿಕ ಚುನಾವಣಾ ಆಯೋಗವು ಮರು ಮತದಾನಕ್ಕೆ ಆದೇಶಿಸಿತ್ತು.
ಅದರಂತೆ ಇಂದು ಮತದಾನ ನಡೆಯುತ್ತಿದೆ. ಯಾವುದೇ ಅವಘಡ ಸಂಭವಿಸದಂತೆ ಎಲ್ಲಾ ಮತಗಟ್ಟೆಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಈ ಸಂಬಂಧ ಸ್ಥಳೀಯರೊಬ್ಬರು ಪ್ರತಿಕ್ರಿಯಿಸಿ, ಮರು ಮತದಾನ ನಡೆಯುತ್ತಿದ್ದು, ನಾವೆಲ್ಲ ಮತದಾನ ಮಾಡಲು ಬಂದಿದ್ದೇವೆ. ಇಂದು ಇಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಹೇಳಿದರು.
ಖುರೈ ವಿಧಾನಸಭಾ ಕ್ಷೇತ್ರದಲ್ಲಿ ಮೊಯಿರಂಗ್ಯಾಂಪು ಸಾಜೆಬ್ ಅಪ್ಪರ್ ಪ್ರೈಮರಿ ಶಾಲೆ ಮತ್ತು ಎಸ್. ಇಬೋಬಿ ಪ್ರಾಥಮಿಕ ಶಾಲೆ (ಪೂರ್ವ ಭಾಗ), ಕ್ಷೇತ್ರಗಾವೊದಲ್ಲಿ ನಾಲ್ಕು, ತೊಂಗ್ಜುನಲ್ಲಿ ಒಂದು, ಉರಿಪೋಕ್ನಲ್ಲಿ ಮೂರು ಮತ್ತು ಕೊಂತೌಜಮ್ ಮರುಮತದಾನ ಕೇಂದ್ರಗಳಾಗಿವೆ. ಸಂಘರ್ಷ ಪೀಡಿತ ಮಣಿಪುರದ ಕೆಲವು ಮತಗಟ್ಟೆಗಳಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಇವಿಎಂಗಳನ್ನು ಧ್ವಂಸಗೊಳಿಸಿರುವ ಘಟನೆಗಳು ವರದಿಯಾಗಿದ್ದವು. ಈ ನಡುವೆಯೂ ಶುಕ್ರವಾರ ಸಂಜೆ 7 ಗಂಟೆಯವರೆಗೆ ಮಣಿಪುರದಲ್ಲಿ ಶೇ.69.18ರಷ್ಟು ಮತದಾನವಾಗಿತ್ತು.